ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...