ಹೆದ್ದಾರಿಗಳ ಹಾಯ್ದು ಊರ ಬಗ್ಗೆ ಅಲ್ಲಿನ ಜನರ ಬಗ್ಗೆ ಫರ್ಮಾನು ಕೊಡುವ ನಾವು ಸಾವಧಾನವಾಗಿ ವಸ್ತು ಸ್ಥಿತಿಯನ್ನು ಗ್ರಹಿಸುವುದು ಕಮ್ಮಿ.
ಹಾಗೆಯೇ ಒಂದು ಕಡೆ ಪ್ರವಾಸ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಊಟ , ಉಡುಗೆಯ ಬಗ್ಗೆ ಲಗೂನ ಬರೆದು ಬಿಡುವ ಚಾಳಿಯೂ ಉಂಟು.
ಇಂತಹ ಸಂದರ್ಭದಲ್ಲಿ ಪ್ರವಾಸ ಕಥನವನ್ನು ಚಿಂತನವನ್ನಾಗಿಸಿ ಒಂದು ಜಾಗದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮತ್ತು ಸಾಮಾನ್ಯರ ಅಭಿಪ್ರಾಯ, ತಲ್ಲಣಗಳನ್ನು, ಬದುಕಿನ ಬಗೆಯನ್ನು, ಹೊರಗಿನವರ ಮುಂದೆ ತೆರೆದುಕೊಳ್ಳ ಬಹುದಾದಷ್ಟೇ ಬಾಗಿಲು ಮತ್ತು ಕಾಪಾಡಿಕೊಳ್ಳುವ ಅಂತರ, ಪ್ರೀತಿ, ಯುದ್ಧ, ಧಾರ್ಮಿಕ ಕಟ್ಟಳೆ ಹೀಗೆ ತಮ್ಮದೇ ಆದ ಸಹಾನುಭೂತಿ ಬೆರೆತ ಆದರೆ ವಸ್ತುನಿಷ್ಠವಾದ ಬರಹಗಳು ಇಲ್ಲಿವೆ.
ಇಸ್ರೇಲ್ ಪ್ಯಾಲೆಸ್ಟೈನ್ ನಿಂದ ಮೊದಲ್ಗೊಂಡು ಸ್ಲೊವೇನಿಯಾ, ಈಜಿಪ್ಟ್, ಕ್ರೊಯೇಷಿಯಾ, ಮ್ಯಾಕಾಡೋನಿಯಾ, ಜೋರ್ಡಾನ್ ಮುಂತಾದ ದೇಶಗಳ ಕುರಿತಾದ ಚಿಂತನೆ ಹಾಗೆಯೇ ಭಾರತೀಯ ಕಲಾವಿದರುಗಳ, ಸೂಫಿಗಳ ಬಗೆಗಿನ ಚಿತ್ರಣವೂ ಇಲ್ಲಿದೆ.
ಒಟ್ಟಿನಲ್ಲಿ ಈ ಎಲ್ಲ ಬರಹಗಳ ಮೂಲ ಧಾತು ಜೀವನ ಪ್ರೀತಿಯೆಂದರೆ ಅದು ಸೂಕ್ತ ಅನ್ನಿಸುತ್ತದೆ
Comments
Post a Comment