ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ.
ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದಂತೆ ತಿದ್ದಿ ಪ್ರಕಟಿಸಿರುವ ಈ ಪುಸ್ತಕ ಪರಿಚಯಿಸಿತು.
ಇಲ್ಲಿ ಕರ್ನಾಟಕದಲ್ಲಿ ಸಂಘ (RSS),ವಿಶ್ವಹಿಂದೂ ಪರಿಷತ್ಗಳು ಹಿಂದೂಗಳ ಏಳಿಗೆಯ ಹೆಸರಿನಲ್ಲಿ ಮಾಡಿದ ಹೋರಾಟಗಳು, ಉಪದ್ರಗಳು ಮತ್ತು ಕೆಲ ಒಳ್ಳೆಯ ಕೆಲಸಗಳ ಬಗ್ಗೆ ಸ್ವತಃ ಮಹೇಂದ್ರಕುಮಾರರು ಬರೆಯುತ್ತಾ ಹೋಗುತ್ತಾರೆ. ಆ ಕಾಲಕ್ಕೆ ಅವರ ಹಿಂದೆ ಮುಂದೆ ಇದ್ದ ಕಾರ್ಕಳದ ಸುನಿಲ್ ಕುಮಾರ್, ಚಿಕ್ಕಮಗಳೂರಿನ ಸಿ ಟಿ ರವಿ ಮುಂತಾದವರು ಇಂದು ಅಧಿಕಾರದಲ್ಲಿ ಬೆಚ್ಚಗಿದ್ದರೆ ಮಹೇಂದ್ರಕುಮಾರ್ ಬೀದಿ ಬೀದಿಯಲ್ಲಿ ಸಂಘದ ಕೆಲ್ಸಗಳನ್ನು ಮಾಡುತ್ತಾ, ಯುವಕರಪಡೆಯನ್ನು ಕಟ್ಟುತ್ತಾ, ಗಲಾಟೆ, ಗದ್ದಲ, ದಾಂದಲೆ ಮಾಡುತ್ತಾ ಕಡೆಗೊಮ್ಮೆ ಮಿಲಾಗ್ರಿಸ್ನ ಚರ್ಚ್ನ ಮೇಲೆ ದಾಳಿಮಾಡುವ ವರೆಗೆ ಬರುತ್ತಾರೆ!
ಇದರಿಂದಾಚೆಗೆ ಅದು ವಿಶ್ವಮಟ್ಟದ ಸುದ್ದಿಯಾಗಿ ತಮಗೆ ಸಂಘ ದಾಳಿಯನ್ನು ಸಮರ್ಥಿಸಿಕೊಳ್ಳಲು ಹೇಳಿದಾಗ ಅದರಲ್ಲಿ ಭಾಗವಹಿಸದಿದ್ದರೂ, ಎದೆಯುಬ್ಬಿಸಿ ಹಾಗೆ ಮಾಡಿದಾಗ ಕಲ್ಲಡ್ಕ ಪ್ರಭಾಕರ ಭಟ್ಟರ ಕುತಂತ್ರಕ್ಕೆ ಬಲಿಯಾಗಿ ಜೈಲುಪಾಲಾಗುತ್ತಾರೆ. ಎರಡು ದಿನದಲ್ಲಿ ಬರುವ ಭರವಸೆಯಿಂದ ಹೋದವರು ತಿಂಗಳುಗಳ ಗಟ್ಟಲೆ ಕಳೆಯುತ್ತಾರೆ. ಅಲ್ಲಿಂದಾ ಹೊರಬರುವುದರ ಒಳಗೆ ಸ್ವಲ್ಪ ಬದಲಾಗುತ್ತಾರೆ. ಹೊರಗೆ ಬಂದು ಭಟ್ಟರ ಮತ್ತು ಇನ್ನಿತರ ಸಂಘದವರ ನಿರ್ಲಕ್ಷಕ್ಕೆ ಗುರಿಯಾಗಿ ಸಂಪೂರ್ಣ ಅಲ್ಲಿಂದ ಹೊರಬಂದು ಆಲ್ಲೋಚನೆ ಮಾಡುತ್ತಾ ರಾಜಕೀಯ ಸೇರಿ ಅಲ್ಲೂ ನೆಲೆಗಾಣದೆ ಕಡೆಗೆ ಏಕಾಂಗಿ ಹೋರಾಟಕ್ಕೆ ಧುಮುಕುತ್ತಾರೆ.
ಈ ಪುಸ್ತಕದಲ್ಲಿ ಚಿಕ್ಕಂದಿನಲ್ಲಿ ಅವರು ಅನುಭವಿಸಿದ ಬಡತನ, ತಾಯಿಯ ಪುಟ್ಟ ಹೋಟೆಲ್, ಕಾಸಿರದಿದ್ದರೂ ಕಷ್ಟ ಪಟ್ಟು ಕಟ್ಟಿದ ಹಿಂದೂ ಯುವಕರ ಪಡೆ ಮತ್ತು ಅವರನ್ನು ಕಡೆಗೆ ಬ್ರಾಹ್ಮಣರಲ್ಲದ ಕಾರಣದಿಂದ ಸಂಘ ಬಲಿಪಶು ಮಾಡಿದ ರೀತಿ, ಸಂಘಕ್ಕಾಗಿ ಸಾಯುವ ಬರೀ ಬಂಟ, ದಲಿತ, ಒಕ್ಕಲಿಗ, ಬಿಲ್ಲವ ಹುಡುಗರು ಬೆಚ್ಚಗೆ ಇರುವ ಮೇಲ್ಜಾತಿಯ ನಾಯಕರುಗಳ ಬಗೆಗೆ ಢಾಳಾಗಿ ಮತ್ತು ನೇರವಾಗಿ ಬರೆದಿದ್ದಾರೆ. ಇಲ್ಲಿ ಅವರ ಪಶ್ಚಾತ್ತಾಪ ಪ್ರಾಮಾಣಿಕವಾಗಿ ಕಾಣುತ್ತದೆಯಾದರೂ ಒಂದು ವೇಳೆ ಇವರು ಬೇಗ ಜೈಲಿನಿಂದಾ ಬಂದು, ಅಧಿಕಾರ ಸಿಕ್ಕಿದ್ದಿದ್ದರೆ ಏನು ಮಾಡುತ್ತಿದ್ದರು ಎಂಬುದರ ಬಗ್ಗೆ ತಣ್ಣಗಿನ ಅನುಮಾನವಿದೆ ! ಇದಕ್ಕೆ ಕಾರಣ ಸಂಘದ, ಪರಿಷತ್ತಿನ, ಯಾವುದೇ ಹೋರಾಟದ ಹಿನ್ನೆಲೆಯಿರದೆ ಸುಲಭವಾಗಿ ಸೀಟ್ ಸಿಕ್ಕಿ (?) ಇಂದು MP, MLA ಗಳಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮುಂತಾದವರ ಬಗೆಗಿನ ಅವರ ಅಭಿಪ್ರಾಯಗಳು ಪುರಾವೆ ಒದಗಿಸುತ್ತವೆ.
ನಾನು ಮಂಗಳೂರಿನಲ್ಲಿದ್ದಾಗ 2008 ರಲ್ಲಿ ನಡೆದ ಚರ್ಚ್ ದಾಳಿ, 2006 ರಲ್ಲಿ ನಡೆದ ಹಿಂದೂ ಮುಸ್ಲಿಂ ಗಲಾಟೆ ಇವೇಲಕ್ಕೂ ಸಾಕ್ಷಿಯಾಗಿದ್ದರಿಂದ ಮತ್ತು
144 ಸೆಕ್ಷನ್ ಇದ್ದರೂ ಶಿಫ್ಟ್ ನಲ್ಲಿ ಕಾರ್ಖಾನೆಗೆ ಹೋಗಲೇಬೇಕಿದ್ದುದ್ದರಿಂದ ಇವೆಲ್ಲಕ್ಕೂ ಪ್ರತ್ಯಕ್ಷ ಸಾಕ್ಷಿಯಾಗಿದ್ದೆ, ಇದು ಈ ಪುಸ್ತಕವನ್ನು ಸ್ವಲ್ಪ ಪರ್ಸನಲ್ ಆಗಿಸಿತು.
ಕಡೆಯ ಮಾತು : ನವೀನ್ ಸೂರಿಂಜೆ ಧೈರ್ಯವಂತರು. ಸದಾ ಈ ತರಹದ ಸೂಕ್ಷ್ಮ, ಜನಪರ, ಪ್ರಸ್ತುತ ಮತ್ತು ಯಾರೂ ಮುಟ್ಟದ ವಿಷಯಗಳನ್ನು ಎತ್ತಿಕೊಂಡು ಸಮರ್ಥವಾಗಿ ಪ್ರಚುರಪಡಿಸುತ್ತಾರೆ. ಅವರ ಹುಟ್ಟುಹಬ್ಬವಂತೆ ಇಂದು, ಅವರಿಗೆ ಒಳ್ಳೆಯದಾಗಲಿ. ಹರಿಯದಿರಲೆಂಬ ಆಶಯದೊಂದಿಗೆ.
Comments
Post a Comment