ಹರ್ಷರ ಈ ಅನುವಾದ ಅತ್ಯಂತ ಮುತುವರ್ಜಿ ಮತ್ತು ಸಂಯಮದ ಕೃಷಿ ಅನ್ನಿಸಿತು. ಕಾದಂಬರಿಯ ಜರ್ಮನ್ ಹೆಸರು 22 Bahnen ಅಂದರೆ ಬಹುಷ ೨೨ ಸುತ್ತುಗಳು.
ಇಲ್ಲಿ ಈಜುಕೊಳ ಒಂದು ಪ್ರತೀಕವಾಗಿ, ಪಾತ್ರವಾಗಿ, ಮನಸಿನ ಪ್ರೆಷರ್ ಕುಕರ್ನ ಸೀಟಿಯಾಗಿ ಗಮನ ಸೆಳೆಯುತ್ತದೆಯಾದರೂ ಕಡೆಗೂ ಇದು ಹುಡುಗಿಯೊಬ್ಬಳ ಮತ್ತವಳ ಪುಟ್ಟ ತಂಗಿ ಈಡಾಳ ನಡುವಿನ ಪ್ರೀತಿ ಮತ್ತು ಸ್ನೇಹದ ಕಥೆಯಾಗಿದೆ.
ಇಲ್ಲಿ ವ್ಯಸನಿ ತಾಯಿ, ಪರಾರಿಯಾದ ತಂದೆ, ಹದಿಹರೆಯದ ಮನಸ್ಥಿತಿ ಎಲ್ಲ ಇದ್ದರೂ ಅದೆಲ್ಲದುದರ ನಡುವೆ ತನ್ನ ಜವಾಬ್ದಾರಿ ಮರೆಯದ ಅಕ್ಕ ಟಿಲ್ಡಾ ಮತ್ತು ಅವಳನ್ನು ಅನುಕರಿಸುವ ಆದರೂ ಸ್ವತಂತ್ಯ್ರ ವ್ಯಕ್ತಿತ್ವದ ಈಡಾರ ಕಥೆಯಾಗಿದೆ. ನನ್ನನ್ನು ಕೇಳಿದರೆ ಜರ್ಮನ್ನಲ್ಲೂ ಇದಕ್ಕೆ ಸೂಕ್ತ ಹೆಸರು “ ನನ್ನ ತಂಗಿ ಈಡಾ” ಎಂದೇ ಹೇಳುವೆ. ಇದು ಹರ್ಷನ ಅನುವಾದದ ಮೊದಲ ಗೆಲುವು ಎಂಬುದು ನನ್ನ ಬಲವಾದ ನಂಬುಗೆ.
ಕ್ಯಾರೋಲಿನ್ ವಾಲ್ ನ ಈ ಕಾದಂಬರಿಯಲ್ಲಿ ಎಲ್ಲಕ್ಕೂ ಜೀವ ಬಂದಿದೆ ಅನ್ನಿಸುತ್ತದೆ. ಇದು ಜರ್ಮನ್ನರು ಭಾವನಾ ರಹಿತರು (ಕಾಫ್ಕಾನ ಕ್ಷಮೆ ಕೇಳುತ್ತಾ !) ಎಂಬ ನನ್ನ ಸಂಕುಚಿತ ದೃಷ್ಟಿಯನ್ನು ಹೊಡೆದು ಉರುಳಿಸಿದೆ. ಅದು ಅನುವಾದದಲ್ಲೂ ತುಂಬಾ ಚೆನ್ನಾಗಿ ಆವಿರ್ಭವಿಸಿದೆ.
ಕಾದಂಬರಿಯಲ್ಲಿ ಬರುವ ಹಲವು ಮಾತುಕಥೆ ಸನ್ನಿವೇಶಗಳನ್ನು ಹರ್ಷ ನಾಟಕಗಳಲ್ಲಿ ಮಾಡುವ ಹಾಗೆ ಆಯಾ ಪಾತ್ರದ ಹೆಸರು ಕೊಟ್ಟು ಅನುವಾದಿಸಿರುವುದು, ಅಕ್ಕ ತಂಗಿಯ ಮಧ್ಯೆ ಬರುವ ಸಿಹಿಯಾದ ಸನ್ನಿವೇಶಗಳನ್ನು ಅಷ್ಟೇ ಮಧುರವಾಗಿ ಮತ್ತು ಸರಳವಾಗಿ ಕಟ್ಟುಕೊಟ್ಟಿರುವುದು, ಪಾತ್ರ ಪ್ರಕೃತಿಯ ವಿವರಣೆ, ಹರೆಯದವರ ಲಿಂಗೋ (ನುಡಿಗಟ್ಟುಗಳು / slang) ತೀರಾ ಬೇಕಾದಲ್ಲಿ ಜರ್ಮನ್ನ ಬಳಕೆ ಎಲ್ಲವೂ ಪೂರಕವಾಗಿವೆ. ಇದರ ಮಧ್ಯೆ ಅವನೇ ಹೇಳುವ ಹಾಗೆ ಜರ್ಮನ್ ಮತ್ತು ಕನ್ನಡದ ಮಧ್ಯೆ ಇಂಗ್ಲಿಶ್ಗೆ ಏನು ಕೆಲಸವೆಂಬಂತೆ ಕೂರು ಕೋಣೆ ( living room), ದೀಪಮಾಲೆ (serial set) ಎಂಬ ಪದಗಳು, ಮ್ಯಾನರಿಸಂ ಅನ್ನ ಹೇಳುವಾಗ “ ಹೆಗಲು ಹಾರಿಸಿದ/ಳು” ಎಂಬ ಬಳಕೆ ತುಂಬಾ ಫ್ರೆಶ್ ಆಗಿದೆ ಅನಿಸಿತು.
ಹರ್ಷ ಬೆಂಗಳೂರೆಂಬ ಅರ್ಬನ್ ಪರಿಸರದಲ್ಲಿ ಬೆಳೆದದ್ದರಿಂದ ಮತ್ತು ಅವನ ಪ್ರಸ್ತುತ ವಯಸ್ಸಿನ ಅಡ್ವಾಂಟೇಜ್ ಇಂದ ಬಹುಶ ಜರ್ಮನಿಯ, ಹದಿಹರೆಯದವರ ತುಮುಲ- ತಲ್ಲಣಗಳನ್ನು, ಬೇಕು-ಬೇಡ, ರೀತಿ-ರಿವಾಜು ಗಳನ್ನು, ಇಷ್ಟ-ಅನಿಷ್ಟಗಳನ್ನು ಚೆನ್ನಾಗಿ ಅರಿತು, ನೋಡಿ, ತಾಳೆಹಾಕಿ ಹಲವೆಡೆ ಸಮರ್ಥವಾಗಿ ಬಳಸಿದ್ದಾನೆ ಅನ್ನಿಸಿತು.
ಇದೆಲ್ಲಕ್ಕೂ ಮುಖ್ಯ ಇಂಬು ಅವನ ಜರ್ಮನ್ ಕಲಿಕೆ, ಸಾಹಿತ್ಯದ, ಭಾಷೆಯ ಮತ್ತು ಬದುಕಿನೆಡೆಯ ಆಸಕ್ತಿ ಅನ್ನಿಸಿತು ನನಗೆ. ಇದನ್ನು ತುಂಬಾ inventive ಆಗಿ ಕಂಡಿತು. ಇವೆಲ್ಲದಕ್ಕೂ ನಾವು ಅವನನ್ನು ಮತ್ತು ಛಂದದ ವಸುಧೇಂದ್ರ ಅವರನ್ನು ಅಭಿನಂದಿಸಲೇಬೇಕಾಗುತ್ತದೆ.
Comments
Post a Comment