ಹಿರಿಯರಾದ ಜಗದೀಶ್ ಕೊಪ್ಪ ಅವರ ಅಂಕಣಗಳನ್ನ ನಾನು ಬಿಡದೆ ಓದುತ್ತೇನೆ. ಅತ್ಯಂತ ತಲಸ್ಪ್ರರ್ಶಿಯಾಗಿ, ವೈವಿಧ್ಯಮಯ ವಿಚಾರಗಳ ಬಗ್ಗೆ ಸರಳವಾಗಿ ಅವರು ಬರೆಯುತ್ತಾರೆ. ಅದು ಪರಿಸರದಿಂದ ಹಿಡಿದು, ಪಟಾಲಂನವರವರೆಗೆ, ಬುದ್ಧನಿಂದ ಹಿಡಿದು ನಕ್ಸಲ್ ಹೋರಾಟದವರೆಗೆ, ಗಾಂಧಿಯಿಂದ ಹಿಡಿದು ಬಂಡವಾಳ ಶಾಹಿಗಳವರೆಗೆ, ಸಬಲೀಕರಣದಿಂದ ಹಿಡಿದು ಸಂಗೀತದ ವರೆಗೆ ವಿಸ್ತಾರವಾಗಿರುತ್ತದೆ. ಕನ್ನಡ ಓದುಗರಿಗೆ ಅಥವಾ ಓದುಗರನ್ನು ಹೀಗೆ ನಾನಾ ವಿಚಾರಗಳ ಬಗ್ಗೆ ಎಜುಕೇಟ್ ಮಾಡಿದವರು ಕಡಿಮೆ ಅದರಲ್ಲಿ ನನಗೆ ಗೊತ್ತಿರುವವರು ಅನಂತ ಚಿನಿವಾರ, ನಾಗೇಶ್ ಹೆಗ್ಡೆ, ಶಿವಸುಂದರ್ ಮುಂತಾದವರು.
ಇಷ್ಟೆಲ್ಲಾ ಹೇಳಲು ಮೊದಲಿಟ್ಟಿದ್ದು ನಾನು ತುಂಬಾ ದಿನದಿಂದ ಓದಬೇಕೆಂದುಕೊಂಡು ಇತ್ತೀಚಿಗೆ ಓದಿದ ಮುಗಿಸಿದ ನಕ್ಸಲ್ ಹೋರಾಟದ ಕುರಿತ ಅವರ “ ಎಂದೂ ಮುಗಿಯದ ಯುದ್ಧ” ಎಂಬ ಪುಸ್ತಕ. ಇದಕ್ಕೆ ಕರ್ನಾಟಕ ಸಾಹಿತ್ಯ ಪರಿಷತ್ ಪ್ರಶಸ್ತಿ ದೊರಕಿದ್ದು ಇದರ ಘನತೆಗೆ ಸಾಕ್ಷಿ.
ಸಂಪೂರ್ಣವಾಗಿ ನಕ್ಸಲ್ ಇತಿಹಾಸಕ್ಕೆ ಅದರ ಬೆಳವಣಿಗೆಗೆ, ಅವಸಾನಕ್ಕೆ ಕಾರಣವಾದ, ಆಗುತ್ತಿರುವ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ಇಲ್ಲಿ ಕಾಣಬಹುದು. ಮುಖ್ಯವಾಗಿ ಮಧ್ಯ ಭಾರತದ ದಂಡಕಾರಣ್ಯ, ಸಂಯುಕ್ತ ಆಂಧ್ರ, ಬೆಂಗಾಳ, ಒರಿಸ್ಸಾ ಮತ್ತು ಕರ್ನಾಟಕಗಳಲ್ಲಿ ತಲೆ ಎತ್ತಿದ ಮತ್ತು ಅದಕ್ಕೆ ಕಾರಣವಾದ ವಿಷಯಗಳ ಬಗ್ಗೆ ಅಕೆಡೆಮಿಕ್ ಶಿಸ್ತಿನಿಂದ, ಚಿಕಿತ್ಸಕ ನೋಟದಿಂದ, ಪರಿಣಿತ ಪತ್ರಕರ್ತನ ಭಾಷೆಯಲ್ಲಿ ಸರಳವಾಗಿ ನಿರೂಪಣೆಗೊಂಡಿರುವ ಈ ಕೃತಿ ಸ್ವಂತ ಅನುಭವದ, ಅಗಾಧವಾದ ಇತರೆ ಪುಸ್ತಕಗಳ, ಅಂಕಣಗಳ ಓದಿನ ಪರಿಣಾಮವೆಂದು ತಿಳಿಯುತ್ತದೆ.
ಇದೇ ಈ ವಿಷಯಗಳ ಆಳಕ್ಕಿಳಿಯಲು ಮತ್ತು ಮುಂದಿನ ಓದಿಗೆ ಸಹಕಾರಿ. ನನ್ನ ಜಿಲ್ಲೆಯ ಪಾವಗಡದ, ಮಲೆನಾಡಿನ ಹೆಬ್ರಿ ಮುಂತಾದ ಕಡೆಗಳಲ್ಲಿ ಆಗಾಗ ನಡೆಯುತ್ತಿದ್ದ ಚಟುವಟಿಕೆಗಳು ನಮಗೆ ದೂರದಿಂದಲೇ ತಿಳಿಯುತ್ತಿರುವಾಗ ಸಾಕೇತ್ ರಾಜನ್ನ ಮತ್ತು ಸಹಚರರ ಎನ್ಕೌಂಟರ್, ಗದ್ದರ್ ಬೆಂಗಳೂರಿಗೆ ಬರುವುದು, ಅದರ ಪ್ರಕ್ಷುಬ್ಧ ವಾತಾವರಣ, ನಂತರದ ದಿನಗಳಲ್ಲಿ ನಾನು ಮಂಗಳೂರಿನಲ್ಲಿದ್ದಾಗಿನ ನಾಲ್ಕು ವರ್ಷದ ಚಾರಣಗಳು ಮತ್ತು ಆಗೆಲ್ಲ ನಮಗೆ ಫೊರೆಸ್ಟ್ನವರಿಂದ ದೊರೆಯುತ್ತಿದ್ದ ಎಚ್ಚರಿಕೆಗಳು (ಹೆಬ್ರಿ, ಕೆಮ್ಮಣ್ಣುಗುಂಡಿ, ಹನುಮನಗುಂಡಿ ಮುಂತಾದ ಕಡೆಗಳಲ್ಲಿ), ಅರ್ಬನ್ ನಕ್ಸಲ್ ವಿವಾದ, ಹೆಚ್ಚು ಹೆಚ್ಚು ಓದಿದವರು ಆಕಡೆ ವಾಲಲ್ಪಟ್ಟಿದ್ದಕ್ಕೆ ಕಾರಣಗಳು, ರಾಜನ್ನ making history ಭಾಗ ೧ ಮತ್ತು ೨ ಇವೆಲ್ಲಾ ಕಾರಣ ಅನ್ನಬಹುದು.
ಒಟ್ಟಿನಲ್ಲಿ ಜಗದೀಶ್ ಕೊಪ್ಪರವರು ಹೇಳುವಹಾಗೆ ಈಗಿನ ಸಂಘಟನೆಯ ಮುಖ್ಯಸ್ಥರ ಬಳಿ ಹಣವಿದೆ, ಅಸ್ತ್ರಗಳಿವೆ ಆದರೆ ಹೋರಾಟದ ಉದ್ದೇಶ, ಆದರ್ಶ, ತಿಳುವಳಿಕೆ ಒಂದೂ ಇಲ್ಲ ಅಥವಾ ಅದೆಲ್ಲ ಮುಂಚೆಯೂ ಇದ್ದದ್ದು ಕೆಲವು ಬೆರಳೆಣಿಕೆಯ ನಾಯಕರಲ್ಲಿ ಮಾತ್ರ. ಯಾರೇ “ಲಾಲ್ ಸಲಾಂ” ಎಂದಾಗಲೆಲ್ಲ ನನಗೆ ಈ ವೈರುಧ್ಯಗಳು ಕಾಡುತ್ತವೆ! ರಕ್ತ ಹೀರುತ್ತಿದ್ದ ಜಮೀನುದಾರರನ್ನ, ಶಾನುಭೋಗರನ್ನು ಸದೆಬಡಿಯಲೋಸುಗ ಆರಂಭವಾದ ಈ ಚಳುವಳಿ ಮುಂದೆ ಲಕ್ಷಾಂತರ ಜನರನ್ನ (ಅಮಾಯಕ and otherwise) ಬಲಿತೆಗೆದುಕೊಂಡು, ಸರ್ಕಾರಗಳಿಗೆ, ನ್ಯಾಯಾಲಯಗಳಿಗೆ ಮತ್ತು ಸ್ಥಾಪಿತ ಪ್ರಜಾಪ್ರಭುತ್ವಕ್ಕೆ ಕಂಟಕವಾಗಿ ನಿಂತಿದೆ.
ನಾನು ಚಿಕ್ಕಂದಿನಲ್ಲಿ ನೋಡಿದ ತೆಲುಗು ಸಿನಿಮಾಗಳ ನಕ್ಸಲ್ ಹೋರಾಟದಂತೆ ನಿಜಾರ್ಥದಲ್ಲಿ ಐದು ಪರ್ಸೆಂಟ್ ಕೂಡ ಇದು ಇಲ್ಲ ಅನ್ನಿಸಿ ಬೇಜಾರಾದದ್ದು ಇದೆ. ಹರೆಯದಲ್ಲಿ ಇಷ್ಟವಾಗುತ್ತಿದ್ದ ಎಡಪಂತೀಯ ವಿಚಾರಗಳು ನಿಧಾನವಾಗಿ ಸಮಾಜವಾದದತ್ತ ತಿರುಗಿದ್ದು ಇದೇ ಕಾರಣಕ್ಕೇ ಇರಬೇಕು ಅನ್ನಿಸುತ್ತಿದೆ. ಇವತ್ತು ಈ ಕಾಮ್ರಡೆಗಳ ಬಳಿ ಹತ್ತಾರು ಸಾವಿರ ಕೋಟಿ ಹಣವಿದೆ ಆದರೆ ಸೈದ್ಧಾಂತಿಕ ನೆಲೆ?
Comments
Post a Comment