ಇತ್ತೀಚೆಗೆ ಫಿಕ್ಷನ್ ಓದುವುದು ಕಡಿಮೆ ಮಾಡಿದ್ದರೂ ನಮ್ಮ ಕನ್ನಡದ ಕಥೆಗಳಿಗೆ, ಕಾದಂಬರಿಗಳಿಗೆ ಮನಸ್ಸು ಯಾವಾಗಲೂ ಮಿಡಿಯುತ್ತದೆ. ಇದು ನಮ್ಮ ಜನಗಳ, ಜನಜೀವನದ ನಿರಂತರ ಸಂಬಂಧದ ಹೊಕ್ಕಳುಬಳ್ಳಿ ಎಂದು ನನಗೆ ಎಂದಿಗೂ ಅನ್ನಿಸುತ್ತದೆ.
ಇದನ್ನು ಹೇಳಲು ಕಾರಣ ನಾನು ಓದಿದ ಇತ್ತೀಚಿನ ಪುಸ್ತಕ Poornima Malagimani ಯವರ ಮ್ಯಾಜಿಕ್ ಸೌಟು. ಇದು ಕೃತಿಯ ಮೂಲಕ ನನ್ನ ಅವರ ಮೊದಲ ಪರೋಕ್ಷ ಮಾತುಕತೆಯೂ ಹೌದು.
ಪೂರ್ಣಿಮಾರ ಇಲ್ಲಿನ ಕಥೆಗಳಲ್ಲಿ ಅಲ್ಲಲ್ಲಿ ಸೈಕಾಲಜಿ, ಮ್ಯಾಜಿಕ್ ರಿಯಲಿಸಂ, ಫ್ಯಾಂಟಸಿ, ಬಂಧದಾಚೆಗಿನ ಸಂಬಂಧಗಳು (?), ಮನುಷ್ಯನ ಸಣ್ಣತನಗಳು, ಖಾಲಿತನ, ಹುಚ್ಚಾಟ, ಮುಸುಕಿನ ಗುದ್ದಾಟ, ವಾಂಛೆ, ಸಿನಿಮೀಯ ರೀತಿಯ ತಿರುವುಗಳು, ಭಾಷೆಯ ವೈವಿಧ್ಯತೆ ( ದಾವಣಗೆರೆ- ದುರ್ಗಾ ಒಂದೆಡೆ, ಮಂಡ್ಯ - ಬೆಂಗಳೂರು ಮತ್ತೊಂದೆಡೆ) ಎಲ್ಲವೂ ಒದಗಿ ಬಂದಿವೆ!
ನಾನು ಬಹುವಾಗಿ ಇಷ್ಟ ಪಟ್ಟ “ ಗಂಟು ಕಳ್ಳರು” ಕಥೆ, ಪ್ರಸ್ತುತಿ ಮತ್ತು ಭಾಷೆಯ ದೃಷ್ಟಿಯಿಂದ ಇಲ್ಲಿರುವ ಎಲ್ಲ ಕಥೆಗಳಿಂದಾ ಭಿನ್ನವಾಗಿದೆ. ಇಲ್ಲಿ ಲೇಖಕಿಯ ಬಾಲ್ಯ ಪರಿಸರದ ಗಾಢ ಪ್ರಭಾವವೂ ಇರಬಹುದು, ಅದಕ್ಕೆ ಇದು ನೈಜವು ದಟ್ಟವೂ ಆಗಿದೆ. ಒಟ್ಟಿನಲ್ಲಿ ವೈವಿಧ್ಯ ಪಾತ್ರಗಳು, ವಸ್ತು ಮತ್ತು ನೆರೇಷನ್ನಲ್ಲಿನ ಭಿನ್ನತೆ, ಬೋಲ್ಡ್ ಆದಂತಾ ವಿಷಯಗಳು ಈ ಸಂಕಲನವನ್ನು ಚೇತೋಹಾರಿಯಾಗಿಸಿದೆ.
Comments
Post a Comment