Skip to main content

ತೇಜೋ ತುಂಗಭದ್ರಾ

 

Tejo-Tungabhadra

ಈ ಪುಸ್ತಕವನ್ನ ಎಷ್ಟು ಲೇಟ್ ಆಗಿ ಓದಿದೆಯೆಂದರೆ ಅಷ್ಟರಲ್ಲಿ ಇದು ಹತ್ತಾರು ಮುದ್ರಣ ಕಂಡಿತ್ತು. ಒಂದು ಬಾರಿ ಅರ್ಧ ಓದಿ ಬಿಟ್ಟು ಮತ್ತೆ ಮೊದಲಿನಿಂದ ಪೂರ್ತ ಓದಿದೆ. ವಸುಧೇಂದ್ರರ ಮಿಕ್ಕ ಕಥೆಗಳಲ್ಲಿ, ನೀಲ್ಗತೆಗಳಲ್ಲಿ ಇದ್ದಂತಲ್ಲ ಇಲ್ಲಿಯ ಭಾಷೆ…this was honey dew!  ಬಳ್ಳಾರಿಯ ಬಿಸಿ, ಗಡಸುತನ ಇಲ್ಲಿ ತುಂಗಭದ್ರೆಯಲ್ಲೂ ಇಲ್ಲ, ತೇಜೋದಲ್ಲಂತೂ ಭಾಷೆ ಅತ್ಯಂತ ಮೃದು, ಥೇಟ್ ಬೆಲ್ಲ ಮತ್ತು ಗ್ಯಾಬ್ರಿಯಲ್ನ ನಿಷ್ಕಲ್ಮಶ ಪ್ರೀತಿಯ ಹಾಗೆ. 

ಐತಿಹಾಸಿಕ ಫಿಕ್ಷನ್ ಬರೆಯುವಾಗಿನ ತಯಾರಿ ಯಾವ ರೀತಿ ಇರುತ್ತದೆ ಇರಬೇಕು ಎಂಬುದು ನನಗೆ ತಿಳಿದಿಲ್ಲ. ಇದು ಕತ್ತಲಲ್ಲಿ ಕರಿಯಾನೆಯನ್ನು ಕುರುಡರು ಮುಟ್ಟಿದ ಹಾಗೆ ಎಂಬುದು ನನ್ನ ಅನಿಸಿಕೆ. ಇದಕ್ಕೆ ಇಂಬು ಕೊಡುವಂತೆ     ಜಿ ಎಸ್ ಎಸ್ ರವರ “ ಚರಿತ್ರೆ ಎಂದರೆ ಅದೊಂದು ಮಬ್ಬು ಕವಿದ ಸುರಂಗ, ಪಂಜು ಹಿಡಿದು ಒಳ ನಡೆದರೆ ಶತಮಾನಗಳ ನೋವು!” ಎಂಬ ಮಾತುಗಳು ಪುಷ್ಟಿಕೊಡುತ್ತವೆ. 

ಇಲ್ಲಿ ವಸುಧೇಂದ್ರರು ಐತಿಹಾಸಿಕ ಗ್ರಂಥಗಳನ್ನ ಮತ್ತು ಅದಕ್ಕಿಂತಾ ಮುಖ್ಯವಾಗಿ ತಮ್ಮ ಇಮ್ಯಾಜಿನೇಶನ್ ಅನ್ನ ಪಂಜಿನಂತೆ ಹಿಡಿದಿದ್ದಾರೆ. ‘ಲೆಂಕತನ’ ಪದ್ಧತಿ ಇಲ್ಲಿ ಬರಿಯ ಆಚರಣೆಯಲ್ಲ ಬದಲಾಗಿ ಇಡೀ ಕಥೆಯ, ಶ್ರೀ ಕೃಷ್ಣದೇವರಾಯರ ವ್ಯಥೆಯ, ಸತ್ತವನ ಚಿತೆಯ ಭಾಗವಾಗಿದೆ. ಹಡಗುಗಳಲ್ಲಿ ಎಂದಿಗೂ ಉಪದ್ರ ಮಾಡುವ ಇಲಿ ಹೆಗ್ಗಣಗಳು ಪಾತ್ರವಾಗಿ, ತಾಪತ್ರಯವಾಗಿ ಕಡೆಗೆ ಬದುಕು ಸಾವಿನ ನಡುವೆಯ hanging thread ಆಗಿಯೂ ಕಾಣಿಸಿವೆ. ಪ್ರೀತಿ ಇಲ್ಲಿ ಯಾವ ನೀರಿನಲ್ಲಿಯೂ ನಿರ್ಭಿಡೆಯಿಂದ ಈಜುವ ಸ್ವಚಂಧ ಮೀನುಗಳಾಗಿ ಮೈದಳೆದಿದೆ. ಜೋಗಮ್ಮರಿಲ್ಲಿ ತಾಯಿಯರಾಗಿ, ಕಾಯುವವರಾಗಿ, ಆತ್ಮದ ಬಂಧುಗಳಾಗಿ ಕಾಣಿಸಿದ್ದಾರೆ. 

ಮೇಲಿನವೆಲ್ಲಾ ಫಿಕ್ಷನ್ನ ಭಾಗವಾದರೆ, ಆಳುವವರು, ಅವರು ಸ್ಪೇನಿನ ರಾಣಿ ಇಸಬೆಲ್ಲ ಆಗಲಿ, ಕೃಷ್ಣದೇವರಾಯರೇ ಆಗಲಿ, ಪೋರ್ಚುಗೀಸ್ನ್ ಆಲ್ಬುಕರ್ಕೆ ಆಗಲಿ, ನಮ್ಮ ಇಂದಿನ ನಾಯಕರುಗಳಂತೆಯೇ ರಕ್ತ ಪಿಪಾಸುಗಳೂ, ಅಧಿಕಾರಶಾಯಿಗಳೂ, ಎಲ್ಲ ನೆಟ್ಟಗಿದ್ದರೆ ಜನಾನುರಾಗಿಗಳೂ, ಜೊತೆಗೆ ಸ್ವಲ್ಪ ಧರ್ಮಾಂಧರೂ ಆಗಿ ಕಾಣಿಸಿದ್ದಾರೆ. ಇತಿಹಾಸದಲ್ಲಿ ಬರುವ ಕಥೆಯನ್ನು ಹಾಗೆಯೇ ಬಟ್ಟಿ ಇಳಿಸದೇ ಕಾರ್ಯಕಾರಣ ಸಂಬಂಧವನ್ನು ಕಲ್ಪಿಸಿ, ನಯವಾಗಿ ಸೃಷ್ಟಿಸಿ, ಪ್ರಸ್ತುತಪಡಿಸಿರುವುದು ಚೇತೋಹಾರಿಯಾಗಿದೆ. 

ಈಗ ಇತಿಹಾಸದ ಸತ್ಯಾಸತ್ಯತೆಯ ಕಡೆಗೆ ಬರುವುದಾದರೆ “ ಮಬ್ಬು ಕವಿದ ಸುರಂಗ “ ವನ್ನು ನೆನಪು ಮಾಡಿಕೊಳ್ಳಲೇ ಬೇಕು. ಮುಸ್ಲಿಂ ಆಳ್ವಿಕೆಯಲ್ಲಿ, ಪೋರ್ಚುಗೀಸರ ರಾಜ್ಯಭಾರದಲ್ಲಿ, ಸ್ಪೇನ್ನ ಇಸಬೆಲ್ಲಾಳ ಆಳ್ವಿಕೆಯಲ್ಲಿ ಅವರವರ ಧರ್ಮ, ದೇವರು, ಜನಗಳನ್ನು ಪುರಸ್ಕರಿಸಿ ಬೇರೆಯವರನ್ನು ಬಲಿಕೊಟ್ಟಿರುವ ಪ್ರಸಂಗಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದರೂ ಅದನ್ನು ಫಿಕ್ಷನ್ ನಲ್ಲಿ ತಂದೊಡನೆ ಅದರ ಸತ್ಯ, ಉದ್ದೇಶ ಮತ್ತು ಪ್ರಸ್ತಾವನೆಯ ಹಿಂದಿನ ಉದ್ದೇಶ ಪ್ರಶ್ನಿಸಲ್ಪಡುತ್ತದೆ ಮತ್ತು ಪಡಬೇಕು ಕೂಡ! 

ಈ ಕಥೆಯ ಬಹುಮುಖ್ಯವಾದ ಸಮಯದಲ್ಲಿ ನಾಯಕಿ ಸರಿ ತಪ್ಪು ಧರ್ಮ ಕರ್ಮಗಳ ಸುಳಿಯಲ್ಲಿ ಸಿಲುಕಿರುವಾಗ ಪುರಂದರದಾಸರು ಬರುವುದು ಬಂದು “ಲೊಳಲೊಟ್ಟೆ“ ಹಾಡನ್ನು ಹಾಡಿ ಅವಳ ಮನಸಿನ ತೊಳಲಾಟಕ್ಕೆ ನಾಂದಿ ಹಾಡಿ ಆಕೆಯನ್ನ ಬಿಡುಗಡೆಗೊಳಿಸುವುದು ಫಿಕ್ಷನ್ ಪ್ರಾಕಾರದ ಬಲು ಬುದ್ಧಿವಂತ ನಡೆಯಾಗಿದೆ.

ಇತಿಹಾಸದ ಎಳೆಗಳನ್ನು, ಅದರಲ್ಲೂ ಜನಜೀವನದ ವಿವರಗಳನ್ನು, ಪ್ರಭುಗಳಿಂದ ಜನಗಳು ಏಗುವುದನ್ನು ಧರ್ಮ, ಪ್ರೀತಿ, ಮತಾಂಧತೆ, ಪದ್ಧತಿಗಳು, ರಾಜಸತ್ತೆ, ವರ್ಗ, ಲಂಪಟತೆ, ಸಹಾನುಭೂತಿ, ಜಾಗತೀಕರಣದ ಪರ್ವ, ಮತ್ಸರ, ಅಸಹಾಯಕತೆ, ದರ್ಪ ಎಲ್ಲವನ್ನೂ ತೇಜೋ- ತುಂಗಭದ್ರ ತನ್ನೊಳಗಿಟ್ಟುಕೊಂಡು ಹರಿದಿದೆ….

ಇಸಬೆಲ್ ರಾಣಿ ಸ್ಪೇನ್ನಲ್ಲಿ ಮುಸ್ಲಿಂ ಆಳ್ವಿಕೆ ಕೊನೆಗೊಂಡದ್ದರ ನೆನಪಿಗಾಗಿ ಮತ್ತು ಒತ್ತೆಯಾಳುಗಳಾಗಿದ್ದ ಕ್ರಿಶ್ಚಿಯನ್ಗಳನ್ನು ಬಿಡುಗಡೆಗೊಳಿಸಿದ ನೆನಪಿಗೆ ಒಂದು ಚರ್ಚ್ ಕಟ್ಟಿಸುತ್ತಾಳೆ, ಅದೂ ಸ್ಪೇನ್ ನ ಪ್ರಾಚೀನ ರಾಜಧಾನಿ ಟೋಲೆಡೋ ನಗರದಲ್ಲಿ, ನಾನಲ್ಲಿಗೆ ಭೇಟಿನೀಡಿದಾಗ ತೆಗೆದ ಫೋಟೋ ಇಲ್ಲಿದೆ. ಅದರ ಮೇಲಿರುವ ಕಬ್ಬಿಣದ ಸರಳುಗಳು ಕ್ರಿಶ್ಚಿಯನ್ ಗುಲಾಮರನ್ನು ಬಂಧಿಸಲು ಬಳಸಿದ್ದಂತೆ! ಈಗಲೂ ಅಲ್ಲಿ ಮುಸ್ಲಿಂ ಮತ್ತು ಯಹೂದಿಗಳ ಸಮುಚ್ಚಯಗಳಿವೆ. 

ದರ್ಶನ್ ಜಯಣ್ಣ


Comments

Popular posts from this blog

The heart of darkness by Joseph Conrad !

ಮೊನ್ನೆ ಫೇಸ್ಬುಕ್ನ ಆಫ್ರಿಕಾದ ಒಂದು ಸಾಹಿತಿಕ ವಲಯದಲ್ಲಿ ನೈಜೀರಿಯಾದ ಇಬ್ಬರು ದಿಗ್ಗಜ ಬರಹಗಾರರಲ್ಲಿ ಯಾರು ಶ್ರೇಷ್ಠ ? ಚೀನುವ ಆಚಿಬೆಯೋ ಅಥವಾ ವೋಲೆ ಸೋಯಿಂಕಾನೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.  ಚೀನುವಾ ಅಚಿಬೆ ಕವಿ, ಕಥೆಗಾರ, ಕಾದಂಬರಿಕಾರನಾಗಿ ಗುರುತಿಸಿಕೊಂಡರೆ ವೋಲೆ ಸೋಯಾಂಕಾನ ಪ್ರಧಾನ ಆಸಕ್ತಿ ನಾಟಕಗಳು …he is a playwright !  ಆಫ್ರಿಕಾದಿಂದ ಹೊರಗಿರುವ ಹೆಚ್ಚು ಜನರಿಗೆ ಅಚಿಬೆಯ things fall apart, the arrow of god , man of the people (African trilogy) ನ ಬಗ್ಗೆ ಹೆಚ್ಚು ಗೊತ್ತಿರುವುದೇ ಹೊರತು ವೋಲೆ ಸೋಯಂಕಾನ ನಾಟಕಗಳು ಅಷ್ಟು ತಿಳಿಯವು. ಅಷ್ಟೇಕೆ ಆಫ್ರಿಕಾದ ಒಳಗೇ ಅಚಿಬೆಯೇ ಹೆಚ್ಚು ಜನಪ್ರಿಯ ಎನ್ನುವುದು ಅಲ್ಲಿ ಒಬ್ಬರ ವಾದ. ಮತ್ತೊಬ್ಬರು ಅವರಿಬ್ಬರ ವಿಚಾರಗಳ ಬಗ್ಗೆ ಬರೆಯುತ್ತಾ ಅಚಿಬೆ ಸಾಮ್ರಾಜ್ಯಶಾಹಿಯ ವಿರುದ್ಧ , ವಸಾಹತುಶಾಹಿಯ ವಿರುದ್ಧ, ನಮ್ಮಲ್ಲಿನ ಅಮಾಯಕತೆಯ, ಅವ್ಯವಸ್ಥೆಯ ವಿರುದ್ಧ ಬಹು ನಿಷ್ಠುರವಾಗಿ ಬರೆದರೆ ಸೋಯಂಕಾನ ಬರಹಗಳಲ್ಲಿ ನಮ್ಮ ಮೂಡನಂಬಿಕೆ, ಕಂದಾಚಾರ, ಶೋಷಣೆಯ ಬಗ್ಗೆ ಹೆಚ್ಚೆಚ್ಚು ಬೆಳಕುಚೆಲ್ಲಲಾಗಿದೆ ಮತ್ತು ಸಾಮ್ರಾಜ್ಯಶಾಹಿಯ ಅಟ್ಟಹಾಸ, ಮನುಷ್ಯರನ್ನು ಮೃಗಗಳಂತೆ, ಜೀತದಾಳುಗಳಂತೆ ನೋಡಿದ, ಸಂಪತ್ತುಗಳನ್ನು ದೋಚಿದ ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಮೃದು ಧೋರಣೆಯಿದೆ ಎಂಬುದು. ಇದಕ್ಕೆ ಪ್ರತಿಕ್ರಯಿಸಿದ ಮತ್ತೊಬ್ಬರು ಈ ಕಾರಣದಿಂದಲೇ ಅಚಿಬೇಗೆ ನೊಬೆಲ್ ಪ್ರಶಸ್ತ...

ನಡು ಬಗ್ಗಿಸಿದ ಎದೆಯ ಧ್ವನಿ

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...

ಜೆರುಸಲೇಂ ….ರಹಮತ್ ತರೀಕೆರೆ

ಹೆದ್ದಾರಿಗಳ ಹಾಯ್ದು ಊರ ಬಗ್ಗೆ ಅಲ್ಲಿನ ಜನರ ಬಗ್ಗೆ ಫರ್ಮಾನು ಕೊಡುವ ನಾವು ಸಾವಧಾನವಾಗಿ ವಸ್ತು ಸ್ಥಿತಿಯನ್ನು ಗ್ರಹಿಸುವುದು ಕಮ್ಮಿ.  ಹಾಗೆಯೇ ಒಂದು ಕಡೆ ಪ್ರವಾಸ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಊಟ , ಉಡುಗೆಯ ಬಗ್ಗೆ ಲಗೂನ ಬರೆದು ಬಿಡುವ ಚಾಳಿಯೂ ಉಂಟು.  ಇಂತಹ ಸಂದರ್ಭದಲ್ಲಿ ಪ್ರವಾಸ ಕಥನವನ್ನು ಚಿಂತನವನ್ನಾಗಿಸಿ ಒಂದು ಜಾಗದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮತ್ತು ಸಾಮಾನ್ಯರ ಅಭಿಪ್ರಾಯ, ತಲ್ಲಣಗಳನ್ನು, ಬದುಕಿನ ಬಗೆಯನ್ನು, ಹೊರಗಿನವರ ಮುಂದೆ ತೆರೆದುಕೊಳ್ಳ ಬಹುದಾದಷ್ಟೇ ಬಾಗಿಲು ಮತ್ತು ಕಾಪಾಡಿಕೊಳ್ಳುವ ಅಂತರ, ಪ್ರೀತಿ, ಯುದ್ಧ, ಧಾರ್ಮಿಕ ಕಟ್ಟಳೆ ಹೀಗೆ ತಮ್ಮದೇ ಆದ ಸಹಾನುಭೂತಿ ಬೆರೆತ ಆದರೆ ವಸ್ತುನಿಷ್ಠವಾದ ಬರಹಗಳು ಇಲ್ಲಿವೆ.  ಇಸ್ರೇಲ್ ಪ್ಯಾಲೆಸ್ಟೈನ್ ನಿಂದ ಮೊದಲ್ಗೊಂಡು ಸ್ಲೊವೇನಿಯಾ, ಈಜಿಪ್ಟ್, ಕ್ರೊಯೇಷಿಯಾ, ಮ್ಯಾಕಾಡೋನಿಯಾ, ಜೋರ್ಡಾನ್ ಮುಂತಾದ ದೇಶಗಳ ಕುರಿತಾದ ಚಿಂತನೆ ಹಾಗೆಯೇ ಭಾರತೀಯ ಕಲಾವಿದರುಗಳ, ಸೂಫಿಗಳ ಬಗೆಗಿನ ಚಿತ್ರಣವೂ ಇಲ್ಲಿದೆ.  ಒಟ್ಟಿನಲ್ಲಿ ಈ ಎಲ್ಲ ಬರಹಗಳ ಮೂಲ ಧಾತು ಜೀವನ ಪ್ರೀತಿಯೆಂದರೆ ಅದು ಸೂಕ್ತ ಅನ್ನಿಸುತ್ತದೆ