Skip to main content

ದೇವರ ತೇರಿಗೂ ಗಾಲಿಗಳು ಬೇಕು!

 

ದೇವರ ತೇರಿಗೂ ಗಾಲಿಗಳು ಬೇಕು…

“ಮರದೊಳಗಡಗಿದ ಬೆಂಕಿಯಂತೆ 

ಎಲ್ಲೋ ಅಡಗಿದೆ ಬೇಸರ 

ಏನೋ ತೀಡಲು ಏನೋ ಕಾಡಲು 

ಹೊತ್ತಿ ಉರಿವುದು ಕಾತರ “ ….ಗೋ ಕೃಷ್ಣ ಅಡಿಗ 

ಭವ್ಯರ ಕವನಗಳನ್ನ ನಾನು ಮೊದಲು ಓದಿದ್ದು ಅವಧಿ ತಾಣದಲ್ಲಿ. ಬಹುಶ ಬುದ್ಧನ ಬಗ್ಗೆ ಅನ್ನಿಸುತ್ತದೆ. 

ಅವರು ಬುದ್ಧನನ್ನ reimagine ಮಾಡಿದ್ದರು. ನಂತರ ಅವರ ನೇರ ವಾಚನವನ್ನ ಸುಚಿತ್ರದಲ್ಲಿ ಕೇಳಿದ್ದು. 

ಅವತ್ತು ಜಿ ಏನ್ ಮೋಹನ್ ಸರ್ ಮತ್ತು ಉಮಾ ಮುಕುಂದ ಅವರೂ ಕೂಡಾ ತಮ್ಮ ತಮ್ಮ ಕವನಗಳನ್ನ ಓದಿದ್ದರು. ಭವ್ಯ ನನಗೆ ನಮ್ಮಂತೆ ಅನ್ನಿಸಿದ್ದರು…ಅಂದರೆ ಈಗೀಗ ಕಾವ್ಯ ಸಹವಾಸದಲ್ಲಿರುವವರು “ ಬರೆದ ಸಾಲಿಗೆ, ಹೊಳೆದ ತಾರೆಗೆ ನಿಬ್ಬೆರಗಾಗೋ ರೀತಿ!” ಒಂದೇ ಆಗಿತ್ತು. 

ಅವತ್ತು ಅವರು ತಮ್ಮಲ್ಲಿ ಕವಿತೆ ಹುಟ್ಟುವಿಕೆಯ ಕಿಡಿಯ ಬಗ್ಗೆ ಹೇಳಿಕೊಂಡಿದ್ದರು. ಅವರು ಕವಿತೆಯನ್ನ ಬರೆದಷ್ಟೇ ಚೆನ್ನಾಗಿ ಓದುತ್ತಾರೆ ಅನ್ನಿಸಿತು. ಅವೆಲ್ಲವನ್ನ ಪುಸ್ತಕ ರೂಪದಲ್ಲಿ ತರಲು ಸಾಕಷ್ಟು ಸಮಯ ಕೊಂಡರು ಅನ್ನಿಸಿದರೂ, ಈ ಸಂಕಲನದ ಪರಿಚಯದ ಮಾತುಗಳು ಹೊಸದಾಗಿ ಬರೆಯುವವರಿಗೆ ತೋರುಬೆರಳಿನಂತಿದೆ. 

ಕೆ ವೈ ಏನ್ ಅವರ ಸೊಗಸಾದ ಪ್ರವೇಶಿಕೆ ಭವ್ಯರನ್ನು, ನಮ್ಮನ್ನು ಕಾವ್ಯದ ಮತ್ತು ಬರೆವಣಿಗೆಯ ದಾರಿಯ ಹಳ್ಳ ದಿಬ್ಬಗಳ ಬಗ್ಗೆ ಎಚ್ಚರಿಸುತ್ತದೆ. ಏನನ್ನು ಕಾಣಬೇಕು ಎಂಬುದನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ಆರತಿ ಹೆಚ್ ಏನ್ ರವರ ಸಾಲುಗಳು ಸಭ್ಯತೆಯನ್ನು ಮೀರದ ಭವ್ಯರ ಕಾವ್ಯದ ಬಗ್ಗೆ ಮೀರಬಾರದ ಅಗತ್ಯದ ಬಗ್ಗೆ ತಿಳಿಸಿಕೊಟ್ಟರೆ ಹೆಚ್ ಆರ್ ಸುಜಾತ ಮ್ಯಾಡಂ ಅತ್ಯಂತ ಸರಳವಾಗಿ ಹೊಸದಾಗಿ ಕವಿತೆ ಬರೆವವರನ್ನ ನಡೆಯಲು, ಒಡಲು ಕಲಿಯುತ್ತಿರುವ ಮಕ್ಕಳಿಗೆ ಹೋಲಿಸಿ, ಅದು ಹೇಗೆ ದೊಡ್ಡವರು ಅದನ್ನ ನೋಡಿ ಸಂಭ್ರಮಿಸುತ್ತಾರೆ ಎಂಬ ಹೃದ್ಯ ವಿಮರ್ಶೆ ಮಾಡಿದ್ದಾರೆ. ಆದರೆ ಅವರೇ ಮುಂದುವರೆದು ಬೆಳೆಯುತ್ತಾ ಬೆಳೆಯುತಾ ಹೇಗೆ ಹೆಜ್ಜೆ, ಮಾತು, ನಡಾವಳಿಯನ್ನ ತಿದ್ದಿಕೊಂಡು ಮುಂದೆ ಸಾಕಬೇಕು ಅದೇ ರೀತಿ ಕಾವ್ಯವೂ ಕೂಡಾ ಬಾಗಿ ಮಾಗಿ ಸಾಗಬೇಕು ಎಂದು ತಿಳಿಸಿದ್ದಾರೆ. 

ನನ್ನ ಪ್ರಕಾರ ಇವರೆಲ್ಲರೂ ಭವ್ಯರ ಕಾವ್ಯದ ಶಕ್ತಿಯನ್ನು ಮಿತಿಯನ್ನು ಗಮನಿಸಿಯೂ ಅವರನ್ನು ಅಟ್ಟಕ್ಕೇರಿಸದೆ ಸೂಕ್ತ ಮಾರ್ಗ ಹೇಳಿಕೊಟ್ಟಿದ್ದಾರೆ, ಅದು ನಮಗೂ ಅನ್ವಯವಾಗುತ್ತದೆ. 

ಇಲ್ಲಿನ ಕವಿತೆಗಳಲ್ಲಿ ಭವ್ಯ ಹದಿ ಹರೆಯದವರನ್ನು ಯಾವತ್ತೂ ಕಾಡುವ ಪ್ರೀತಿ, ದೇವರು, ಅಸಮಾನತೆ, ಅಸಂಗತತೆ, new found ಹೊಳಹುಗಳು, ಅಮೂರ್ತ ಭಾವ, ಸುತ್ತ ಮುತ್ತಲಿನ ವಿಷಾದ, ಒಳ ಹೊರಗು ಮುಂತಾದ ವಿಷಯಗಳ ಬಗ್ಗೆ ಅತ್ಯಂತ ತಾಜಾ ಆದ ಕವಿತೆಗಳನ್ನು ಬರೆದಿದ್ದಾರೆ. ಒಂದಷ್ಟು ಕಡೆ ವಿಷಯಗಳು ಪುನರಾವರ್ತನೆಯಾಗಿದೆ ಎನ್ನುವುದನ್ನು ಪಕ್ಕಕ್ಕೆ ಇಟ್ಟು ಹೊಸ ಹೊಸ ಸಾಲುಗಳನ್ನು ಸವಿಯಬೇಕಿದೆ….ನಾನು ಬರೆದಂತೇ ಅವರೂ ಕೂಡ ಹೆಚ್ಚು “ವಾಚ್ಯ” ವಾಗಿ ಬರೆದಿರುವರು. “ ಸೂಚ್ಯ” ದಲ್ಲಿ ಎಲ್ಲ ಹೇಳಲಿಕ್ಕೆ ಸಾಕಷ್ಟು ಅನುಭವ ಬೇಕು, ಬಹುಶ ನಾವಿನ್ನೂ ಮಾಗಬೇಕು. ಆದರೆ ಅವರ ಒಂದಷ್ಟು ಸಾಲುಗಳು ಅದರಲ್ಲೂ ಪ್ರೀತಿ- ವಿರಹದ ಬಗ್ಗೆ ಬರೆದಾಗ ಅದು ಎಲ್ಲೂ “ ಸಭ್ಯತೆಯ ಎಲ್ಲೆ ಮೀರಿಲ್ಲ” ಮತ್ತು ಈ ಮಾತನ್ನ ಆರತಿಯವರು ಶುರುವಿನಲ್ಲೇ ಹೇಳಿದ್ದಾರೆ. ನನಗೆ ಇಷ್ಟವಾದ ಹಲವು ಪದ್ಯಗಳಲ್ಲಿ ಕೆಲವನ್ನು ಸಾಲುಗಟ್ಟಿದ್ದೇನೆ…..


“ ಹಠವೋ ಆಸೆಯೋ ತೂತು ತಪ್ಪಲೆಯಲ್ಲಿ 

ಅದೆಷ್ಟು ತುಂಬಿದ ಕನಸುಗಳು! 

ಜಾರುವಷ್ಟು ಹೊತ್ತೂ ಹರುಷ ಅವಳದು 

ಒದ್ದೆ ಕಣ್ಣು ಒದ್ದೆ ಪಾತ್ರೆ “ 


“ ಬೆಳಕ ಕಾಣಲು ಯತ್ನಗಳಿರಬೇಕು 

ಸಾಗಲು ದೇವರ ತೇರಿಗೂ ಗಾಲಿಗಳು ಬೇಕು!” 


“ಇಬ್ಬರಿಗೂ ನಿರಾಯಾಸದ ಕೆಲಸವಾದರೂ 

ಭೇಟಿಯಲ್ಲಿ ಮಾತ್ರ ಅವನದು ನಡುಗುವ ಕೈಗಳು 

ಅವಳದು ಒಣಗಿದ ಗಂಟಲು “ 


“ ನೀ ಬಾರದ ಭಾರದ ಸತ್ಯ ಅನೃತವಾಗಲಿ 

ಕೊರಳ ಸೀಳುತಿರುವ ಗರಳ ನಿತ್ಯ ಅಮೃತವಾಗಲಿ “ 

ಈ ಎಲ್ಲ ಕವಿತೆಗಳೂ ಆರಾಮವಾಗಿ, ಧಾವಂತವಿರದೆ ಸಾಗಿವೆ ಮತ್ತು ಅದೇ ಅನುಭೂತಿಯನ್ನು ಓದಿದವರಿಗೂ ದಾಟಿಸುತ್ತವೆ. ಪುಸ್ತಕದ ಮುಖಪುಟ ವಿನ್ಯಾಸವೇ ಒಂದು ವಿಶಿಷ್ಟವಾದ ಕವಿತೆಯಂತಿದೆ, ಬಣ್ಣ soothing ಆಗಿಯೂ ಪಂಚ ಭೂತಗಳು (ಸೂರ್ಯ, ಚಂದ್ರ, ಮೋಡ, ಮರ, ಕಲ್ಲು) ಗಾಲಿಯಾಗಿಯೂ ಇವೆ ಎಂದೆನಿಸುವಹಾಗೆ….

Comments

Popular posts from this blog

The heart of darkness by Joseph Conrad !

ಮೊನ್ನೆ ಫೇಸ್ಬುಕ್ನ ಆಫ್ರಿಕಾದ ಒಂದು ಸಾಹಿತಿಕ ವಲಯದಲ್ಲಿ ನೈಜೀರಿಯಾದ ಇಬ್ಬರು ದಿಗ್ಗಜ ಬರಹಗಾರರಲ್ಲಿ ಯಾರು ಶ್ರೇಷ್ಠ ? ಚೀನುವ ಆಚಿಬೆಯೋ ಅಥವಾ ವೋಲೆ ಸೋಯಿಂಕಾನೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.  ಚೀನುವಾ ಅಚಿಬೆ ಕವಿ, ಕಥೆಗಾರ, ಕಾದಂಬರಿಕಾರನಾಗಿ ಗುರುತಿಸಿಕೊಂಡರೆ ವೋಲೆ ಸೋಯಾಂಕಾನ ಪ್ರಧಾನ ಆಸಕ್ತಿ ನಾಟಕಗಳು …he is a playwright !  ಆಫ್ರಿಕಾದಿಂದ ಹೊರಗಿರುವ ಹೆಚ್ಚು ಜನರಿಗೆ ಅಚಿಬೆಯ things fall apart, the arrow of god , man of the people (African trilogy) ನ ಬಗ್ಗೆ ಹೆಚ್ಚು ಗೊತ್ತಿರುವುದೇ ಹೊರತು ವೋಲೆ ಸೋಯಂಕಾನ ನಾಟಕಗಳು ಅಷ್ಟು ತಿಳಿಯವು. ಅಷ್ಟೇಕೆ ಆಫ್ರಿಕಾದ ಒಳಗೇ ಅಚಿಬೆಯೇ ಹೆಚ್ಚು ಜನಪ್ರಿಯ ಎನ್ನುವುದು ಅಲ್ಲಿ ಒಬ್ಬರ ವಾದ. ಮತ್ತೊಬ್ಬರು ಅವರಿಬ್ಬರ ವಿಚಾರಗಳ ಬಗ್ಗೆ ಬರೆಯುತ್ತಾ ಅಚಿಬೆ ಸಾಮ್ರಾಜ್ಯಶಾಹಿಯ ವಿರುದ್ಧ , ವಸಾಹತುಶಾಹಿಯ ವಿರುದ್ಧ, ನಮ್ಮಲ್ಲಿನ ಅಮಾಯಕತೆಯ, ಅವ್ಯವಸ್ಥೆಯ ವಿರುದ್ಧ ಬಹು ನಿಷ್ಠುರವಾಗಿ ಬರೆದರೆ ಸೋಯಂಕಾನ ಬರಹಗಳಲ್ಲಿ ನಮ್ಮ ಮೂಡನಂಬಿಕೆ, ಕಂದಾಚಾರ, ಶೋಷಣೆಯ ಬಗ್ಗೆ ಹೆಚ್ಚೆಚ್ಚು ಬೆಳಕುಚೆಲ್ಲಲಾಗಿದೆ ಮತ್ತು ಸಾಮ್ರಾಜ್ಯಶಾಹಿಯ ಅಟ್ಟಹಾಸ, ಮನುಷ್ಯರನ್ನು ಮೃಗಗಳಂತೆ, ಜೀತದಾಳುಗಳಂತೆ ನೋಡಿದ, ಸಂಪತ್ತುಗಳನ್ನು ದೋಚಿದ ವಸಾಹತುಶಾಹಿ ವ್ಯವಸ್ಥೆಯ ಬಗ್ಗೆ ಮೃದು ಧೋರಣೆಯಿದೆ ಎಂಬುದು. ಇದಕ್ಕೆ ಪ್ರತಿಕ್ರಯಿಸಿದ ಮತ್ತೊಬ್ಬರು ಈ ಕಾರಣದಿಂದಲೇ ಅಚಿಬೇಗೆ ನೊಬೆಲ್ ಪ್ರಶಸ್ತ...

ನಡು ಬಗ್ಗಿಸಿದ ಎದೆಯ ಧ್ವನಿ

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಪ್ಪನ ಜೊತೆ ಬಾಬಾ ಬುಡನ್ಗಿರಿಗೆ ಹೋಗಿದ್ದೆ. ಅಲ್ಲಿನ ಪರ್ವತಗಿರಿ ಶ್ರೇಣಿ , ಮಂಜು ಮೋಡ, ತಣ್ಣನೆಯ ಅನಾಮಿಕತೆ, ದಾರಿಯಲ್ಲಿ ಶಿಥಿಲಗೊಂಡು ಬಿದ್ದಿದ್ದ ಶೆಡ್ ಮನೆಗಳು, ಮುರಿದಿದ್ದ ಕೈಮರ, ಐದು ಮೀಟರ್ ಮುಂದೆ ಬಿಲ್ಕುಲ್ ಕಾಣದ ಹಾದಿ, ಮುಂಜಾವಿನಲ್ಲೂ ಕವಿದಿದ್ದ ಮಬ್ಬುಗತ್ತ್ಲು, ಕೊರೆವ ಮುತ್ತಿನಂತೆ ಉದುರುವ ಮಾಣಿಕ್ಯಧಾರಾ ಜಲಪಾತ, ಜಾರುನೆಲದ ಮೇಲೆ ಜೀವ ಬಾಯಿಗೆ ಬಂದಂತೆ ಮಾಡಿದ ಸ್ನಾನ, ದತ್ತರ ಗುಹೆ, ಅಲ್ಲಿಗೆ ಬರುತ್ತದೆಂದು ಗುಮಾನಿಯಿರುವ ಹುಲಿ, ಜೈಲಿನಂತ ಗುಹೆಯ ಹೊರಗಡೆಯ ಬಾಬಾ ಸಾಬರ ಗೋರಿಗಳು, ಅಲ್ಲಿದ್ದ ಮುಲ್ಲಾ ಒಬ್ಬರು ಕೊಟ್ಟ ಅದೆಂತದೋ ನಾಲ್ಕು ಬೀಜದ ಕಾಯಿಗಳು …ನನ್ನ ಸ್ಮೃತಿಯಲ್ಲಿ ಹಾಗೆಯೇ ಇದೆ. ಕಾಲೇಜಿನಲ್ಲಿದ್ದಾಗ ಇದೇ ದತ್ತ ಪೀಠದಲ್ಲಿ ಆಗಾಗ ನಡೆಯುತ್ತಿದ್ದ ಜಟಾಪಟಿ, ದತ್ತಮಾಲಾ ಅಭಿಯಾನ, ಹಿಂದೂ ಮುಸ್ಲಿಂ ಪ್ರಕ್ಷುಬ್ಧ ಪರಿಸ್ಥಿತಿ, ಪ್ರಗತಿಪರರೂ ಸಂಘದವರಿಗೂ ನಡೆಯುತ್ತಿದ್ದ ಮಾತಿನ, ತೋಳ್ಬಲದ ಗುದ್ದಾಟ, ತಲೆಕೆಡಿಸಿ ಕೂರುತ್ತಿದ್ದ ಜಿಲ್ಲಾಡಳಿತ, ಅದನ್ನು ಮತ್ತೆ ಮತ್ತೆ ತೋರಿಸುತ್ತ ಅವರಿವರನ್ನ ಸಂದರ್ಶನ ಮಾಡುತ್ತಿದ್ದ ಮೀಡಿಯಾ, ಒಬ್ಬೊಬ್ಬರ ಹಿನ್ನೆಲೆ, ಹುನ್ನಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾರದ ವಯಸ್ಸು , ಆಮೇಲಾಮೇಲೆ ತಿಳಿದ ಒಂದೊಂದೇ ವಿಷಯಗಳು, ತಿಳಿಯದೇ ಉಳಿದುಹೋದ ನೂರಾರು ಮಜಲುಗಳು ಇವೆಲ್ಲವೂ ಮಹೇಂದ್ರ ಕುಮಾರರು ಬರೆದು, ನವೀನ್ ಸೂರಿಂಜೆಯವರು ಮೂಲ ಆಶಯಕ್ಕೆ ಚ್ಯುತಿ ಬಾರದ...

ಜೆರುಸಲೇಂ ….ರಹಮತ್ ತರೀಕೆರೆ

ಹೆದ್ದಾರಿಗಳ ಹಾಯ್ದು ಊರ ಬಗ್ಗೆ ಅಲ್ಲಿನ ಜನರ ಬಗ್ಗೆ ಫರ್ಮಾನು ಕೊಡುವ ನಾವು ಸಾವಧಾನವಾಗಿ ವಸ್ತು ಸ್ಥಿತಿಯನ್ನು ಗ್ರಹಿಸುವುದು ಕಮ್ಮಿ.  ಹಾಗೆಯೇ ಒಂದು ಕಡೆ ಪ್ರವಾಸ ಹೋಗಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಊಟ , ಉಡುಗೆಯ ಬಗ್ಗೆ ಲಗೂನ ಬರೆದು ಬಿಡುವ ಚಾಳಿಯೂ ಉಂಟು.  ಇಂತಹ ಸಂದರ್ಭದಲ್ಲಿ ಪ್ರವಾಸ ಕಥನವನ್ನು ಚಿಂತನವನ್ನಾಗಿಸಿ ಒಂದು ಜಾಗದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಮತ್ತು ಸಾಮಾನ್ಯರ ಅಭಿಪ್ರಾಯ, ತಲ್ಲಣಗಳನ್ನು, ಬದುಕಿನ ಬಗೆಯನ್ನು, ಹೊರಗಿನವರ ಮುಂದೆ ತೆರೆದುಕೊಳ್ಳ ಬಹುದಾದಷ್ಟೇ ಬಾಗಿಲು ಮತ್ತು ಕಾಪಾಡಿಕೊಳ್ಳುವ ಅಂತರ, ಪ್ರೀತಿ, ಯುದ್ಧ, ಧಾರ್ಮಿಕ ಕಟ್ಟಳೆ ಹೀಗೆ ತಮ್ಮದೇ ಆದ ಸಹಾನುಭೂತಿ ಬೆರೆತ ಆದರೆ ವಸ್ತುನಿಷ್ಠವಾದ ಬರಹಗಳು ಇಲ್ಲಿವೆ.  ಇಸ್ರೇಲ್ ಪ್ಯಾಲೆಸ್ಟೈನ್ ನಿಂದ ಮೊದಲ್ಗೊಂಡು ಸ್ಲೊವೇನಿಯಾ, ಈಜಿಪ್ಟ್, ಕ್ರೊಯೇಷಿಯಾ, ಮ್ಯಾಕಾಡೋನಿಯಾ, ಜೋರ್ಡಾನ್ ಮುಂತಾದ ದೇಶಗಳ ಕುರಿತಾದ ಚಿಂತನೆ ಹಾಗೆಯೇ ಭಾರತೀಯ ಕಲಾವಿದರುಗಳ, ಸೂಫಿಗಳ ಬಗೆಗಿನ ಚಿತ್ರಣವೂ ಇಲ್ಲಿದೆ.  ಒಟ್ಟಿನಲ್ಲಿ ಈ ಎಲ್ಲ ಬರಹಗಳ ಮೂಲ ಧಾತು ಜೀವನ ಪ್ರೀತಿಯೆಂದರೆ ಅದು ಸೂಕ್ತ ಅನ್ನಿಸುತ್ತದೆ