ಮಹಾನಗರ ಒಂದರ ಚಹರೆಗಳು, ಒಳಸುಳಿಗಳು, ಧರ್ಮ ಕರ್ಮ ಮರ್ಮಗಳು ಹಲವು ಬಗೆಯವು. ಒಬ್ಬರಿಗೆ, ಒಂದು ಪುಸ್ತಕಕ್ಕೆ ಇದು ನಿಲುಕುವುದೂ ಇಲ್ಲ, ಹಾಗೆ ನಿಲುಕಿಬಿಟ್ಟರೆ ಅದು ಮಹಾನಗರವೂ ಅಲ್ಲ. ಇಷ್ಟಂದಮಾತ್ರಕ್ಕೆ ಅದು ಅತೀತವೂ ಅಲ್ಲ. ಅಂತಹ ಮಹಾನಗರ, ಅದರಲ್ಲೂ ಬೆಂಗಳೂರು, ಕಳೆದ ಕೆಲವು ದಶಕಗಳಲ್ಲಿ ಜಾಗತಿಕ ಮುನ್ನೆಲೆಗೆ ಬಂದ ಕಾರಣ it is still developing….ನೆಗೆಟಿವ್ ಆಧರಿಸಿದ ಫೋಟೋದ ಹಾಗೆ.
ಜೋಗಿಯವರ ಹಿಡಿ ಪ್ರಯತ್ನ, ಈ ಪುಸ್ತಕದ ಮತ್ತು ಇತರೆ ಬೆಂಗಳೂರ್ ಸೀರೀಸ್ನ ಪುಸ್ತಕಗಳ ಮೂಲಕ ಆ ಮೃಗಜಲವನ್ನ ಹಿಡಿಯುವುದೇನೋ ಎಂದು ನನಗೆ ಆಗಾಗ ಅನಿಸಿದೆ.
B ಕ್ಯಾಪಿಟಲ್ ಪುಸ್ತಕವನ್ನ ಗಿರೀಶ್ ಕಾರ್ನಾಡರು ಬ್ಯಾಲೆ ಮಾಡುವ ಆಸೆ ವ್ಯಕ್ತಪಡಿಸಿದ್ದರ ಅರ್ಥ ಈ ಪುಸ್ತಕ ಓದಿದಮೇಲೆ ನನಗೆ ಸ್ವಲ್ಪಮಟ್ಟಿಗೆ ತಿಳಿಯಿತು.
ಇಲ್ಲಿ ಒಂದಷ್ಟು ವಿಷಯಗಳು ಕಾವ್ಯಾತ್ಮಕವಾಗಿ, ಮನುಷ್ಯ ಸಂಬಂಧಗಳು ಸಂಕೀರ್ಣವಾಗಿ, ಶಹರ ನದಿಯಾಗಿ, ಅದರೊಳಗಿನ ಸುಳಿಯಾಗಿ, ಸ್ನೇಹಿತನಾಗಿ, ಪರಿಚಯವೇ ಇರದ ಅನಾಮಿಕನಾಗಿ ಕಾಣಿಸುತ್ತದೆ. ಇದೆಲ್ಲ ಇದ್ದರೂ ಇಲ್ಲಿ ಇದು ನಮಗೆ ಅಪರಿಚಿತವೇ ಆಗಿ ಉಳಿಯುವುದು ಅದರ ತನವೋ ಅಥವಾ ಅದು ನಮ್ಮ ಬಲಹೀನತೆಯೋ ಗೊತ್ತಿಲ್ಲ.
ನನಗೆ ನಮ್ಮೂರು ತುಮಕೂರಿನ ಪೇಟೆಯಲ್ಲಿನ ಬಾಲ್ಯದ ನೆನಪು ಮತ್ತದರ ಪರಿಚಯವಿರುವುದರಿಂದ ಅಲ್ಲಿ ನನ್ನ ಗೆಳೆಯರ (ಮೊದಲ) ಬಳಗವಿರುವುದರಿಂದಲೂ, ನನಗೆ ಎಲ್ಲಿ ಹೋದರೂ ತುಮಕೂರಿನ ಹ್ಯಾಂಗೊವರ್ ಬಿಡುವುದಿಲ್ಲ. ಆದ್ದರಿಂದಲೇ ನನಗೆ ಮಹಾನಗರ ಎಷ್ಟು ಕೊಟ್ಟರೂ ಅದು ನಮ್ಮೂರಿನ ಮುಂದೆ ಎರಡನೆಯ ಚಾಯ್ಸ್. ನನ್ನ ಹೆಂಡತಿಗೆ, ಕಸಿನ್ಸ್ ಗೆ ಅದು ಹಾಗಲ್ಲ. ಅವರಿಗೆ ಅರ್ಥವಾಗುವ ಮಹಾನಗರ ನನಗೆ ಅರ್ಥವಾಗುವುದೇ ಬೇರೆಯ ತರಹ- ಇದನ್ನು ಜೋಗಿಯವರು ಒಪ್ಪುತಾರೆ.
ಆದರೂ ನಾನು ಬೆಂಗಳೂರನ್ನು ಬಿಟ್ಟು ನಮ್ಮೂರಿಗೆ ಹೋಗದಿದ್ದರೆ ಅದಕ್ಕೆ ಮಕ್ಕಳು, ಕೆರಿಯರ್, ನಮ್ಮೂರಲ್ಲಿ ಖಾಲಿ ಕೂರಬೇಕಾಗಬಹುದಾ ಎಂಬ ಅನುಮಾನ, ಅಲ್ಲಿ ಪೂರ್ತಿಯಾಗದ ನನ್ನ ಮಹತ್ವಾಕಾಂಕ್ಷೆ ಕಾರಣ ಅನಿಸುತ್ತದೆ, ಇದು ಮಹಾನಗರದ ಸಂಕೀರ್ಣತೆಯೆಷ್ಟೋ ಅಷ್ಟೇ ನನ್ನೊಳಗಿನ ಸಂಕುಚಿತತೆ (ಅಥವಾ ಚಾಲಾಕಿತನ) ಕಾರಣ ಇರಬಹುದು. ನನಗೆ ಹೋಗದಿದ್ದರೂ ಹೋಗಬಯಸುವ ಊರೊಂದಿದೆ, ನನ್ನ ಬೆಂಗಳೂರಿನಲ್ಲೇ ಹುಟ್ಟಿದ ಗೆಳೆಯ ಮತ್ತು ಬಂಧುಗಳಿಗೆ ಆ utopian ಕನಸೂ ಇಲ್ಲ, ಏಕೆಂದರೆ ಅವರಿಗೆ ಬೆಂಗಳೂರೇ ಎಲ್ಲ….ಹುಟ್ಟೂರು, ಮೆಟ್ಟೂರು, ಪ್ರೀತಿ, ನೌಕರಿ ಕಂಡುಕೊಂಡ ಊರು ಇದೇ. ಅವರಿಗೆ ಮಹಾನಗರ “ ಅವರದ್ದೇ” ನಗರವಾಗಷ್ಟೇ ಕಾಣುತ್ತದೆ.
ಇಷ್ಟೆಲ್ಲಾ ಯೋಚಿಸಲು ಅಣುವು ಮಾಡಿಕೊಟ್ಟ ಜೋಗಿಯವರ B ಕ್ಯಾಪಿಟಲ್ ನೆನಪಿನ ಪುಟಗಳ ಗುಚ್ಛವನ್ನೊಮ್ಮೆ ನೀವು ಓದಬೇಕು- ಇದು ಜೋಗಿಯವರ ಎಲ್ಲ ಕೃತಿಗಳಿಂಗಿಂತಾ ಭಿನ್ನ.

Comments
Post a Comment