ಮಂಜುನಾಯಾಕರೇ ನಿಮ್ಮ ‘ಫೂ’ ಸಂಕಲನದಲ್ಲಿ ಇನ್ನಷ್ಟು ಕಥೆಗಳಿರಬಾರದಾ ಎನ್ನಿಸುವಷ್ಟು ಖುಷಿಯಾಯ್ತು ಓದಿ.
ಇದು ಓದಿಗಿಂತಾ ಒಂದು ಅನುಭೂತಿ …ಕೆಲವೇ ಕೆಲವು ಬರಹಗಾರರಲ್ಲಿ ಮತ್ತು ಕೆಲವು ಬರಹಗಳಲ್ಲಿ ಇರುವ ದ್ರವ್ಯ.
‘ಪಾತಿ’ ಎಂಬ ಚಂದದ, ಮನಕಲುಕುವ, ಮುಗ್ದ, ಹಸಿ ಬಿಸಿ ಪ್ರೇಮ ಕಥೆಯನ್ನು ಹೊರತು ಪಡಿಸಿದರೆ ಮತ್ತೆಲ್ಲ ಕಥೆಗಳಲ್ಲೂ ಒಂದನ್ನೊಂದು ಬೆಸೆಯುವ ಅಂಶ ಇದೆ ಅನ್ನಿಸಿತು. ಅದು ಮುಖ್ಯವಾಗಿ ಪಾತ್ರಗಳ ಜೀವನದ ‘ಹುಡುಕಾಟದಲ್ಲಿ’, ತಹತಹಿಕೆಯಲ್ಲಿ ಕಾಣಿಸುತ್ತದೆ….’ಪಾತಿ’ ಯಲ್ಲಿ ಪ್ರೇಮ ಮತ್ತು ಸಲ್ಲಾಪಗಳು ಬಹುಷ ಅದನ್ನು ಮರೆಮಾಚಿರಬಹುದು !
ವಜ್ರಮುನಿಯ ಬಂಕಿನ (ಕೊಟ್ಟಿಗೆ ಮನೆಯ)ಆಧ್ಯಾತ್ಮ,ಏಕಕಾಲಕ್ಕೆ ಲೌಕಿಕವೂ- ಅಲೌಕಿಕವೂ ಪ್ರಸ್ತುತ - ಅಪ್ರಸ್ತುತ ಎಲ್ಲವೂ ಆಗಬಹುದು, ಹಾಗೆಯೇ ಅಪ್ಪ ಮತ್ತು ಮಗನನ್ನು ಬೆಸೆಯುವ ಕೊಂಡಿಯೂ ಆಗಿರಬಹುದು.
“ಮಿಂಚು ಹುಳದಲ್ಲಿ“ ಬರುವ ಹುಡುಗನನ್ನು ಕಾಡುವ, ವಿಚಿತ್ರ ತಳಮಳವನ್ನ, ಹೇಳಿಕೊಳ್ಳಲಾಗದ, ಸುಮ್ಮನಿರಲಾಗದ, ಪರಿಹರಿಸಿಕೊಳ್ಳಲಾಗದ, ಸ್ಪಷ್ಟವಾಗಿ ಬರೆಯಲೂ ಸಾಧ್ಯವಾಗದ….ಒಟ್ಟಿನಲ್ಲಿ ಇಲ್ಲಿನ ಮಿಂಚುಹುಳುವಿನ ಸಂಕೇತವೇ ಓದುಗನಿಗೆ ಬೆಳಕಲ್ಲದ ಆದರೆ ಕತ್ತಲೂ ಅಲ್ಲದ ಪರಿಸ್ಥಿತಿಯನ್ನ ದಾಟಿಸುವ ಸಮರ್ಥ ಬಳಕೆ ಅಂತ ಅನ್ನಿಸಿತು. ಇಲ್ಲೇ ‘ಕಥೆ’ ಭಾವ- ಬುದ್ಧಿಯನ್ನು ಮೀರಿ ಆದರಾಚೆಗಿನ ಅನುಭೂತಿಯನ್ನು ಮುಟ್ಟುವುದು ಅನ್ನಿಸುತ್ತದೆ.
“ಖತಲ್ ರಾತ್ರಿ” ನಮ್ಮೂರಿನ ಮೊಹರಂ ಆಚರಣೆಯನ್ನು “ ಬಾಬಯ್ಯನ್ ಗುಂಡಿಗೆ ಸೌದೆ ಕೊಡ್ರಿ” ಈ ಎಂದು ಬರುತ್ತಿದ್ದ ಸಾಬರ ಹುಡುಗರನ್ನು ಆ ದಿನಕ್ಕೆ ಸಜಾಗುತ್ತಿದ್ದ ಎಲ್ಲ ಹುಡುಗರನ್ನೂ ನೆನಪಿಸಿತು.
“ತೇರು ಸಾಗಿತಮ್ಮ ನೋಡಿರೆ” ಮತ್ತು “ ಕನಸಿನ ವಾಸನೆ” ಕಥೆಗಳು ಮನುಷ್ಯ ಸಂಬಂಧಗಳ ಬಗ್ಗೆ ಆಶ್ಚರ್ಯವನ್ನು, ಭರವಸೆಯನ್ನು , ಮಿತಿಯನ್ನು ಮತ್ತು ಸುಲಭವಾಗಿ ಅರ್ಥವಾಗದ ಆದರೆ ಗುಪ್ತಗಾಮಿನಿಯಂತಿರುವ ಕೊಸರನ್ನು ಕಾಣಿಸಿದರೆ, Cover page story “ ಫೂ” ಮಾತ್ರ ನನ್ನತ್ತೆಯನ್ನ ನೆನಪಿಸಿತು. ನನ್ನ ಬಾಲ್ಯದಲ್ಲಿ ಅವಳು ಮತ್ತೊಬ್ಬ ಅಮ್ಮನೇ ಆಗಿದ್ದಳು ಮತ್ತು ಅವಳ ಜೀವನದಲ್ಲೂ ಅನಿರೀಕ್ಷಿತ ಘಟನೆಗಳು ನಡೆದು ಕೆಲಕಾಲ ಶಾಪಗ್ರಸ್ಥಲಾಗಿದ್ದಳು.
ಈ ಕಥೆ ಯಾಕೋ ವೈದೇಹಿಯವರ ‘ಟುವಾಲು’ ಕಥೆಯನ್ನು ನೆನಪಿಸಿತು.
ನಿಮ್ಮ ಮುಂದಿನ ಎಲ್ಲ ಕಥೆಗಳು ಯಾವುದೇ ಕಾರಣಕ್ಕೂ ಮುಗ್ದತೆಯನ್ನು ಮತ್ತು ಬೆರಗನ್ನು ಕಳೆದೂಕೊಳ್ಳದೇ ಇರಲೆಂದು ಆಶಿಸುವೆ.
(ಎಂದೋ ಓದಬೇಕಿದ್ದ ಪುಸ್ತಕವನ್ನು ತ್ವರಿತವಾಗಿ ಓದಲು ಪ್ರೇರೇಪಿಸಿದ Poornima Malagimani ಯವರ ಬರಹಕ್ಕೆ
ಅಕ್ಕರೆ. ಪ್ರಕಟಿಸಿದ Akshatha Humchadakatte ಅಕ್ಕನಿಗೆ more power 👍🏼)
Comments
Post a Comment