ನೋವಿನ ನೆಂಟರು !
ಇತ್ತೀಚೆಗೆ ನನ್ನ ಸುತ್ತಮುತ್ತಲಿನಲ್ಲಿ ಹಲವು ಜನ ಕ್ಯಾನ್ಸರ್ ಖಾಯಿಲೆಗೆ ತುತ್ತಾಗುವುದನ್ನ ಕಂಡಿದ್ದೇನೆ. ಅವರಲ್ಲಿ ಹೆಚ್ಚು ಜನ ಮಹಿಳೆಯರೇ ಆಗಿರುವುದು ಬೇಸರದ ಮತ್ತು ಸೋಜಿಗದ ಸಂಗತಿ. ಪುರುಷರು ಹೆಚ್ಚಾಗಿ ಹೃದಯ ಸಂಬಂಧಿ ಕಾರಣಗಳಿಗೆ ಬಲಿಯಾದರೆ ಹೆಣ್ಣುಮಕ್ಕಳು ಕ್ಯಾನ್ಸರ್ ಗೆ ಗುರಿಯಾಗುತ್ತಿದ್ದಾರೆ.
ನನ್ನ ಅಮ್ಮನ ಅಕ್ಕಂದಿರಲ್ಲಿ ಇಬ್ಬರು ಕ್ಯಾನ್ಸರ್ಗೆ ಬಲಿಯಾದದ್ದರಿಂದ ಮತ್ತು ಅವರು ತೀರಿಕೊಂಡಾಗ ಅವರ ಮಕ್ಕಳುಗಳು ಅಂದರೆ ನನ್ನ ಅಣ್ಣ ಅಕ್ಕಂದಿರು ಪುಟ್ಟಮಕ್ಕಳಾಗಿದ್ದರಿಂದ ಈ ಪುಸ್ತಕ ಹೆಚ್ಚು ಪರ್ಸನಲ್ ಆಗತೊಡಗಿತು. ಇದನ್ನು ಮೊದಲು ಓದಿದ ಅಮ್ಮ ಆಗಾಗ ವಿಷಣ್ಣಳಾಗುತ್ತಿದ್ದಳು, ನಾನೂ ಕಾರಣ ಕೇಳದೆ ಸುಮ್ಮನಿದ್ದೆ . ಸ್ವಲ್ಪ ದಿನಗಳನಂತರ ಪುಸ್ತಕವನ್ನು ಕೈಲಿ ಹಿಡಿದೇ ಆಳುತ್ತಿದ್ದಳು ಆಗ ನನಗೆ ಅವಳು ಅನ್ಯಮನಸ್ಕಳಾಗುತ್ತಿದ್ದುದರ ಕಾರಣ ಹೊಳೆಯಿತು.
ಭಾರತಿಯವರು ತಮ್ಮ ಅನುಭವವನ್ನು ಅತ್ಯಂತ ಧೈರ್ಯವಾಗಿ, ನೇರವಾಗಿ, ಜೋವಿಯಲ್ ಆಗಿ ನಿರೂಪಿಸಿದರೂ ನೋವಿನ ಕಥೆಯನ್ನು ಹೇಳುವಾಗ ನೋವನ್ನು ಹೇಗೆ ಮರೆಮಾಚುವುದು? ಅದರಲ್ಲೂ ಇದರ ವೈಯಕ್ತಿಕ ಅನುಭವವಿರುವ ಅಮ್ಮನಂತವರು ಅಲ್ಲಿನ ಲವಲವಿಕೆಯ ವಿಷಯವನ್ನು ಹೆಚ್ಚು ಗಮನಿಸರು.
ಆದರೆ ಇದು ಪ್ರಸ್ತುತ ಕ್ಯಾನ್ಸರ್ನಿಂದ ನರಳುತ್ತಿರುವವರು ಮತ್ತವರ ಮನೆಯವರಿಗೆ ಕತ್ತಲನ್ನು ದಾಟಬಹುದಾದ ಒಂದು ಪುಟ್ಟ ಹಣತೆ. ಹಾಗೆಯೇ ಬಳಲುತ್ತಲಿರುವರ ಜೊತೆ ಮನೆಯ ಹೊರಗಿನವರು ಹೇಗೆ ವ್ಯವಹರಿಸಬೇಕು ಎಂಬುದರ
ಸೂಚನಾ ಪಲಕ ಕೂಡಾ.
ಒಮ್ಮೆ ನನ್ನಪ್ಪನನ್ನು ನೋಡುತ್ತಿದ್ದ ಡಾಕ್ಟರ್ ಒಬ್ಬರನ್ನ ಅವರ ಪಾರ್ಕಿನ್ಸನ್ ಪರಿಸ್ಥಿತಿಯ ಮೇಲೆ ಒಂದು ಪ್ರಶ್ನೆ ಹೆಚ್ಚು ಕೇಳಿದಾಗ ಅವರು “ ಇದಕ್ಕೆಲ್ಲಾ ಕ್ಯೂರ್ ಇಲ್ಲಾ ರೀ ಸುಮ್ನೆ ಮನೆಲ್ ಇಟ್ಕೊಂಡ್ ನೋಡ್ಕೊಳ್ಳಿ ಅಷ್ಟೇ” ಅಂದಿದ್ದರು.
ಆಗ ನನಗೆ ಬಂದ ಸಿಟ್ಟಿಗಿಂತಾ ಅದ ನೋವು, ನಿರಾಶೆ ಅಷ್ಟಿಷ್ಟಲ್ಲ. ಅಮ್ಮನೂ ಅಲ್ಲೇ ಇದ್ದಳಲ್ಲ , ಅವಳಿಗೆ ಹೇಗಾಗಿರ ಬೇಡ? ಇದನ್ನು ಇಲ್ಲಿ ಹೇಳಿದ ಕಾರಣ ಭಾರತಿಯವರಿಗೆ ತಮ್ಮ ಖಾಯಿಲೆಯ ಬಗ್ಗೆ ಮೊದಲಬಾರಿಗೆ ಗೊತ್ತಾಗುವುದೂ ಇದೇ ರೀತಿಯ ಸಹಾನುಭೂತಿಯಿರದ ವೈದ್ಯರಿಂದ!
ಅಲ್ಲಿಂದ ಅವರು ಕುಗ್ಗಿ, ಒಗ್ಗಿ, ನೋವುಂಡು, ನಂಬಿಕೆ ಕಳೆದುಕೊಂಡು, ಸಟೆದೆದ್ದು , ಬಂದದ್ದನ್ನು ಎದುರಿಸಿ ಮತ್ತೆ ಎದ್ದು ನಿಲ್ಲುವ ಪ್ರಕ್ರಿಯೆಯ ಕಥನವೇ ಸ್ಪೂರ್ತಿದಾಯಕ.
ಅನಂತಮೂರ್ತಿಯುವರು ಈ ಕೃತಿ ಎಲ್ಲ ಭಾಷೆಗಳಲ್ಲೂ ಅನುವಾದವಾಗಬೇಕು ಎಂದಿದ್ದಾರೆ. ಅದರ ಅವಶ್ಯಕತೆ ಖಂಡಿತಾ ಇದೆ. ಆ ದೇವರಿಗೆ ಹೋಗಿ ಇಲ್ಲಿ ಪೂಜೆ ಮಾಡಿಸಿ , ಅಯುರ್ವೇದ ಮಾಡಿಸಿ ಎನ್ನುವವರ ಮಾತನ್ನೂ ಕೇಳುತ್ತಾ ಈ ಪುಸ್ತಕವನ್ನು ಒಮ್ಮೆ ಪೂರ್ತಿ ಓದಿದರೆ ಮನಸ್ಸಿಗೆ ಚೈತನ್ಯ ಮತ್ತು ದೇಹಕ್ಕೆ ಕೊಂಚ ಸಟೆದೇಳುವ ಶಕ್ತಿ ಬಂದೀತು !
Comments
Post a Comment