ಗುರುಗಳನ್ನ ಒಮ್ಮೆ ಭೇಟಿ ಮಾಡಿದಾಗ ಒಂದು ಮಾತನ್ನು ಹೇಳಿದ್ದರು, ಅದು " ವಯಸಾಗುತ್ತಿದೆ! ಎಲ್ಲವನ್ನೂ ಮಾಡಲು ಹೊರಡುವುದು ಉಚಿತವಲ್ಲವಾದ್ದರಿಂದ ಒಂದು ಅಥವಾ ಎರಡು ಧಾರಾವಾಹಿ, ಒಂದು ಚಲನಚಿತ್ರ ಮತ್ತು ತಮ್ಮ ಬದುಕಿನ ನೆನಪುಗಳನ್ನು ಪುಸ್ತಕ ರೂಪದಲ್ಲಿ ತರಬೇಕು " ಎನ್ನುವುದು.
ಅದಾದಮೇಲೆ ಎರಡು ಮೂರು ಧಾರಾವಾಹಿಗಳನ್ನು ಮಾಡಿದರು. ಕರ್ನಾಟಕದ ರಾಜಕೀಯವನ್ನ ಕುರಿತ ಸಾಕ್ಷಚಿತ್ರ ಶುರುಮಾಡಿ ಅದೇಕೋ ಕೆಲವೇ ಕಂತುಗಳಿಗೆ ನಿಲ್ಲಿಸಿಬಿಟ್ಟರು ಎಂಬ ನೆನಪು. ಹೊಡಿ ಬಡಿ ಕಡಿ ಸಿನಿಮಾಗಳ ಮಧ್ಯೆ ಅದರ ವ್ಯವಹಾರಕ್ಕೆ ಹೋಗದಿರುವುದೇ ಒಳಿತೆಂದು ಸುಮ್ಮನಾದರು ಅಂದುಕೊಂಡೆ. ಈಗ ಉಳಿದಿದ್ದು ಅವರ 'ಆತ್ಮಕತೆ '. ಅದರ ನಿರೀಕ್ಷೆಯಲ್ಲಿದ್ದೆ.... ಈಗ ಅದು ' ನೆನಪಿನ ಪುಟಗಳು ' ಎಂಬ ಅತ್ಯಂತ ಸೂಕ್ತವಾದ ಹೆಸರಿನಲ್ಲಿ ಸಾಕಾರಗೊಂಡಿದೆ.
ಒಬ್ಬ ಮನುಷ್ಯ ಇಷ್ಟು ರಂಗಗಳಲ್ಲಿ ಕ್ರಿಯಾಶೀಲರಾಗಿರುವುದು ಸಾಧ್ಯವಾ? ಅದೂ ಒಂದಕ್ಕೊಂದು ಸಂಭಂದವೇ ಇಲ್ಲದ ರಂಗಗಳಲ್ಲಿ? ಅದೂ ತಮ್ಮ ಆದರ್ಶಗಳನ್ನು ಜೀವನ ಪೂರ್ತಿ ಪಾಲಿಸುತ್ತಾ, ಪರರ ಹಣ ಪಾಶಾಣ ಎಂಬುದನ್ನು ನಂಬಿ? ರಾಜಕೀಯ, ಸಾಹಿತ್ಯ, ನಾಟಕ, ಕೃಷಿ, ಲಾಯರಿಕೆ, ನಟನೆ, ನಿರ್ದೇಶನ, ನಿರ್ಮಾಣ....... ಅಬ್ಬಬ್ಬಾ ಅನ್ನಿಸುವಂತೆ!
ಗುರುಗಳ ನೆನಪಿನ ಪುಟಗಳನ್ನು ಓದುತ್ತಿದ್ದರೆ ಒಂದು ಆತ್ಮೀಯ ಭಾವ ನಮ್ಮನ್ನು ಹಿಡಿದಿಡುತ್ತದೆ. ಬಹುಷಃ ಅದಕ್ಕೆ ಕಾರಣ ಅವರ ಸರಳ ಮತ್ತು ನೇರ ಶೈಲಿ. "ಎಲ್ಲ ಸತ್ಯವನ್ನೂ ಹೇಳಲು ಹೋಗುವುದಿಲ್ಲ" ಎನ್ನುತ್ತಾರೆ. ಹಾಗೆಯೇ ಅಲ್ಲಲ್ಲಿ ಓದುಗನಿಗೆ " Reading between the lines" ಗೆ ವಿಪುಲ ಅವಕಾಶಗಳನ್ನು ಮಾಡಿಕೊಟ್ಟಿದ್ದಾರೆ! ದೊಡ್ಡವರ ಸಹವಾಸ ಬಿಸಿಲು ಕುದುರೆಯಂತೆ ಎಂಬುದನ್ನು ಹಲವು ಕಡೆ ನಿರೂಪಿಸಿದ್ದಾರೆ.
ಸ್ನೇಹಕ್ಕೆ, ಸಂಭಂದಕ್ಕೆ, ಆದರ್ಶಕ್ಕೆ, ಮನುಷ್ಯ ಪ್ರೀತಿಗೆ, ಪ್ರೊಫೆಷನಲ್ ethics ಮತ್ತು conduct ಗೆ, ನಿರಂತರ ಪ್ರಯತ್ನಕ್ಕೆ, ಬಿದ್ದಾಗೆಲ್ಲ ಏಳುವ, ಏನನ್ನಾದರೂ ಮಾಡುತ್ತಿರುವ ಹಪಹಪಿತನಕ್ಕೆ ಅವರ ಬದುಕೇ ಸಾಕ್ಷಿ.
ಈ ಪುಸ್ತಕವನ್ನು ಸಂಪೂರ್ಣ ಓದಿದಮೇಲೆ ನನಗೆ ಗುರುಗಳಂತೆಯೇ ' ನನ್ನಪ್ಪ ಕೂಡ ' ಅನ್ನಿಸುತ್ತಿದೆ.... ಆದರೆ ಕಾಲಚಕ್ರದಲ್ಲಿ ಗುರುಗಳು ನೋವು ನಲಿವು ಎಲ್ಲವನ್ನೂ ಕಂಡಿದ್ದಾರೆ, ಚಕ್ರದ ಕೆಳಗಿದ್ದವರು ಮೇಲೆ ಬಂದಿದ್ದಾರೆ... ಅಪ್ಪನಿಗೆ ಅ ಭಾಗ್ಯ ಯಾಕೋ ಬರಲಿಲ್ಲ!
ಗುರುಗಳ ಜೀವನದಲ್ಲಿ ಸಾಹಿತ್ಯದ, ಸಂಭಂಧಗಳ (ಪ್ರೀತಿ ಮತ್ತು ಪಶ್ಚತ್ತಾಪ) ಪ್ರಭಾವ ವಿಪುಲವಾಗಿದೆ. ಅದರಿಂದಲೋ ಏನೋ ಅವರ ನಾಟಕಗಳು, ಧಾರಾವಾಹಿಗಳು ಪದರ ಪದರವಾಗಿ ಮನಸ್ಸನ್ನು, ಮತ್ತು ಮನುಷ್ಯ ತಾಕಲಾಟವನ್ನು ಕೇಂದ್ರವಾಗಿ ಇರಿಸಿಕೊಂಡಿವೆ ಅನ್ನಿಸುತ್ತದೆ.
ಕಳೆದ 50 -60 ವರ್ಷಗಳ ರಾಜಕೀಯ, ಸಾಂಸ್ಕೃತಿಕ, ಸಾಹಿತಿಕ ಮತ್ತು ಜನಜೀವನದ ಚಿತ್ರಣಕ್ಕೆ ಈ 'ಪುಟಗಳು ' ಸೂಕ್ತ ಸಂಗಾತ ಒದಗಿಸುತ್ತವೆ. ಎಲ್ಲರಂತೆ ನಾನೂ ಇದರ ಮುಂದಿನ ಆವೃತ್ತಿಗಾಗಿ ಕಾಯುವೆ 

Comments
Post a Comment