ಕುಣಿಗಲ್ಲಿನ ಕಾಬೂಲಿವಾಲ....
ಈ ಕೃತಿ ತನ್ನ ಹೆಸರಿನಿಂದಲೇ ನನ್ನನ್ನು ಆಗಾಗ ಓದಲು ಪ್ರಚೋದಿಸುತ್ತಿತ್ತು. ಕೊಂಡ ಒಂದು ಪುಸ್ತಕವನ್ನ ಸ್ನೇಹಿತರೊಬ್ಬರಿಗೆ ಓದಲು ಕೊಟ್ಟೆ. ನಂತರ ಕೊಂಡದ್ದನ್ನು ನೆನ್ನೆ ಸಂಪೂರ್ಣ ಓದಿ ಮುಗಿಸಿದ ಮೇಲೆ ನನಗೆ ಅನ್ನಿಸಿದ್ದು ಈ ಕೃತಿ ಬೇರೆ ಭಾಷೆಗಳಿಗೆ ಅನುವಾದವಾಗಬೇಕು, ಹೆಚೆಚ್ಚು ಜನರಿಗೆ ತಲುಪಬೇಕು, ಕಾರಣ ಇಲ್ಲಿರುವ ವಿಶಿಷ್ಟ, ವಿಕ್ಷಿಪ್ತ ಅನುಭವಗಳು.
ಮಿಲಿಯನ್ ಗಟ್ಟಲೆ ಡಾಲರ್ ಹಣ ತೆತ್ತರೂ ಈ ಅನುಭವ ನಮಗೆ ಸಿಗುವುದಿಲ್ಲ. ತಾಲಿಬಾನಿನಂತಹಾ ಗೆರಿಲ್ಲ ಪಡೆ ಇತ್ತೀಚೆಗೆ ಶಕ್ತ ರಾಷ್ಟ್ರಗಳಾದ ಅಮೇರಿಕಾ, ನೆಟೋ ಪಡೆ, ಶೀತಲ ಸಮರದಲ್ಲಿ mighty ರಷ್ಯಾ ಪಡೆಗಳನ್ನು ಹಿಮ್ಮೆಟ್ಟಿಸಿದೆ. ಅಲ್ಲಿನ ಬಂಡುಕೋರರನ್ನು ಬಗ್ಗು ಬಡಿಯಲು ಬಹುಪಾಲು ಇವರೆಲ್ಲಾ ಸೇರಿ ಸಫಲವಾಗಿಲ್ಲ... ಅದಕ್ಕೆ ಕಾರಣ ಏನು? ವಿಶ್ವದ ನಾನಾ ಕಡೆಗಳಿಂದ ಬಂದ ಜನರು ಇಲ್ಲೇಕೆ ಕೆಲಸ ಮಾಡುತ್ತಾರೆ? ಮಿಲಿಟರಿ ಕ್ಯಾಂಪ್ನಲ್ಲಿ ಏಕೆ ಮತ್ತು ಹೇಗೆ ಇರುತ್ತಾರೆ? ಅವರ ತಳಮಳಗಳೇನು? ಅವಶ್ಯಕತೆಗಳೇನು? ಯಾರು ಇವನ್ನೆಲ್ಲಾ ಯಾವ ಕಾರಣಕ್ಕೆ ಹೇಗೆ ನಡೆಸುತ್ತಾರೆ? ಇದರಲ್ಲಿ ಕಾರ್ಪೊರೇಟ್ಗಳ ಹಾಗು ಸರ್ಕಾರಗಳ ಪಾತ್ರವೇನು? ಅಲ್ಲಿಗೆ ತಮ್ಮ ದೇಶದಿಂದ freedom ಡಿಫೆಂಡ್ ಮಾಡಲು ಬರುವ ಯೋಧರು ನಿಜವಾಗಿ ಯಾರ ಸ್ವಾತಂತ್ರ್ಯವನ್ನ ಡಿಫೆಂಡ್ ಮಾಡುತ್ತಾರೆ? ಇದರಿಂದ ಯಾರಿಗೆ ಲಾಭವಾಗುತ್ತದೆ? ಸಾಮಾನ್ಯ ಪ್ರಜೆಗೆ ಇದೆಲ್ಲಾ ಹೇಗೆ ತಟ್ಟುತ್ತದೆ? ಹೀಗೆ ಹಲವಾರು ಸಂಗತಿಗಳು ಕೊಂಚ ಮಟ್ಟಿಗೆ ಮನದಟ್ಟಾಗುತ್ತವೆ.
ಎಲ್ಲದಕ್ಕಿಂತಾ ಹೆಚ್ಚು ಇಷ್ಟವಾಗುವುದು ಮಂಜುನಾಥ್ ಅವರ ಬರವಣಿಗೆಯ ಶೈಲಿ. ಅಲ್ಲಿ ಅತಿರೇಕ, ಅತಿಶಯೋಕ್ತಿಗಳಿಲ್ಲ. ನಮ್ಮನ್ನು ಮೆಚ್ಚಿಸುವ ಹುನ್ನಾರಗಳಿಲ್ಲ. ಆದರೆ ಓದಿನ ಒಘಕ್ಕೆ ತೊಂದರೆಯೇ ಇಲ್ಲ. ಅದಕ್ಕೆ ಕಾರಣ, ಅವರು ಎಲ್ಲವನ್ನೂ ಸ್ವಾರಸ್ಯಕರವಾಗಿ ಮತ್ತು ಪ್ರಾಮಾಣಿಕವಾಗಿ ವಿವರಿಸುವ ರೀತಿ. ಐದು ವರ್ಷಗಳಿಂದ ಸೌದಿಯೂ ಸೇರಿ ನಾನು ಸುತ್ತಿರುವ ಅನೇಕ ಅರಬ್ ರಾಷ್ಟ್ರಗಳ ಸಂಸ್ಕೃತಿಯ ಹಿನ್ನೆಲೆಯಲ್ಲಿ ಒಂದಷ್ಟು ರಿಲೇಟ್ ಮಾಡಿಕೊಳ್ಳುವ ಸಂಗತಿಗಳಿದ್ದರೂ ಮಂಜುನಾಥ್ ರವರ ಕಾರ್ಯಾನುಭವ, ಸುತ್ತಾಟ ಅಗಾಧ ಮತ್ತು ಅನನ್ಯ ಬಗೆಯದ್ದು.
ಹತ್ತು ಹದಿನೈದು ದಿನಗಳ ಕಾಲ ಕಾಶ್ಮೀರಕ್ಕೆ ಹೋಗಿ ಬಂದು ಕಥೆ ಹೊಡೆಯುವ ಮಾದರಿಯಲ್ಲ... ಹತ್ತಾರು ವರ್ಷ ಅಂತಹ ಆಯಕಟ್ಟಿನ ಮಿಲಿಟರಿ ಬೇಸ್ನಲ್ಲಿ ಕೆಲಸ ಮಾಡಿ, ಸಾವನ್ನು ಹತ್ತಿರದಿಂದ ನೋಡಿ, ಇಲ್ಲಿಗೆ ಯಾಕೆ ಬಂದೆನೋ ಎಂದು ತನ್ನನ್ನು ತಾನೇ ಶಪಿಸಿಕೊಂಡು ಆದರೂ ಮತ್ತೆ ಮತ್ತೆ ಹೋಗಬೇಕಾಗಿ ಬಂದು, ಕಡೆಗೆ ಇದನ್ನೆಲ್ಲಾ ಬರೆಯಬೇಕಾ ಎಂದು ಕೇಳಿಕೊಳ್ಳುವ ಪ್ರಾಮಾಣಿಕ ಗೊಂದಲದ ಮನಸ್ಸು ಅವರದ್ದು.
ಇದನ್ನು ಇವರು ಕನ್ನಡದಲ್ಲಿ ಬರೆಯದೇ ಹೋಗಿದ್ದರೆ ನಮಗೆ ಯುದ್ಧ ಕ್ಯಾಂಪ್ಗಳ ಎಷ್ಟೋ ವಿಷಯಗಳ ಬಗ್ಗೆ ತಿಳಿಯುತ್ತಲೇ ಇರಲಿಲ್ಲ! ಕಾರಣ ಅದರ ವಸ್ತು ವಿಷಯ, ಅವರಿಗೆ ತಮ್ಮ ಕೆಲಸದ ನಿಮಿತ್ತ ಅಲ್ಲಿ ಸಿಕ್ಕ ಅಕ್ಸಸ್ ಮತ್ತು ಅದೆಲ್ಲವನ್ನು ಗಮನಿಸಿ ಬರೆದ ಅವರ ಸೂಕ್ಷ್ಮಗ್ರಾಹಿತನ.
Comments
Post a Comment