ಇದೊಂದು 82 ಪುಟಗಳ ಪುಟಾಣಿ ಪುಸ್ತಕ. ಆದರೆ ಇದು
ಹೊತ್ತುಕೊಂಡ ಜವಾಬ್ದಾರಿ ಬಹಳ ದೊಡ್ಡದು.ಪ್ರಾಚೀನ ಭಾರತದಲ್ಲಿನ ವಿದ್ಯಾಭ್ಯಾಸ ಮತ್ತು ಕಲಿಕೆಯ ಪರಂಪರೆಯನ್ನ ಪರಿಚಯ ಮಾಡಿಸುವುದು ಅಷ್ಟು ಸುಲಭದ ಮಾತಲ್ಲ.ಸಾವಿರ ಸಾವಿರ ಪೇಜುಗಳು ಬರೆದರೂ ಕಡಿಮೆಯೇ ಎಂದೆನಿಸಿದ್ದು ಈ ಪುಸ್ತಕವನ್ನು ಓದಿ ಅದರೊಳಗೆ ಕೊಟ್ಟಿದ್ದ reference ಪುಸ್ತಕಗಳ ಪಟ್ಟಿ ನೋಡಿದಮೇಲೆಯೇ.
ಈ ಪುಸ್ತಕಕ್ಕೆ ಇಷ್ಟು ಓದಿಕೊಂಡಿದ್ದಾರೆ ಇದರ ಕರ್ತೃ ಸಹನಾ ಸಿಂಗ್.ಇದು ನಮಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ಪರಿಚಯಿಸುತ್ತದೆ. ಅದೆಂದರೆ ಶತಮಾನಗಳ ಮುಂಚೆಯೇ ಇದ್ದ ಗುರುಶಿಷ್ಯ ಪರಂಪರೆ, ವಿಶ್ವವಿದ್ಯಾಲಯಗಳು, ಅಲ್ಲಿನ ಲಿಂಗಭೇಧವಿಲ್ಲದ ಮುಕ್ತ ವಾತಾವರಣ, ಗ್ರಂಥಾಲಯಗಳು ಅಲ್ಲಿ ಕಲಿಸಲ್ಪಡುತ್ತಿದ್ದ ವ್ಯಾಕರಣ, ಗಣಿತ, ಕಲೆ, ವ್ಯಾಪಾರ, ತರ್ಕ, ಅರೋಗ್ಯ ಸಂಬಂಧಿ ವಿಷಯಗಳು ನೀಡುತ್ತಿದ್ದ ಪದವಿಗಳು, ಹೆಣ್ಣು ಮಕ್ಕಳಿಗಿದ್ದ ತಮ್ಮನ್ನು ಬೇಕಾದವರನ್ನು ಮದುವೆಯಾಗುವ ಅಥವಾ ಬ್ರಹ್ಮಚಾರಿಗಳಾಗೆ ಇದ್ದು ಜ್ಞಾನಾರ್ಜನೆ ಮುಂದುವರೆಸುವ ಸ್ವಾತಂತ್ರ್ಯ ಇತ್ಯಾದಿ.
ಇಲ್ಲಿ ಪ್ರಸ್ತುತ ಪಾಕಿಸ್ತಾನದ ರಾವಲಪಿಂಡಿಯಲ್ಲಿ ದ್ವಂಸವಾಗಿರುವ ತಕ್ಷಶಿಲಾ ವಿಶ್ವವಿದ್ಯಾಲಯದ ಅದರ ಹಿಂದಿನ ವೈಭವದ ಬಗೆಗಿನ ವಿಸ್ತೃತ ವಿವರಣೆಯಿದೆ. ಅದರ ನಂತರ ಬಿಹಾರದ ನಳಂದಾ, ವಿಕ್ರಮಶೀಲ ಕಾಶ್ಮೀರದ ಶಾರದಾ ಕಂಚಿಯ ವಿಶ್ವವಿದ್ಯಾಲಯಗಳು ಇವುಗಳ ನಡುವಿದ್ದ ಪೈಪೋಟಿ ಅವು ಶಿಕ್ಷಕ ಮತ್ತು ಛಾತ್ರರನ್ನು ಸೆಳೆಯಲು ಮಾಡುತ್ತಿದ್ದ ಪೈಪೋಟಿ ಮತ್ತು ನೋಂದಣಿಗೆ ಇಡುತ್ತಿದ್ದ ಕ್ಲಿಷ್ಟ ಪ್ರವೇಶ ಪರೀಕ್ಷೆಗಳು ಆ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರುಮಾಡುವ coaching ಸೆಂಟರ್ಗಳು ಇವೆಲ್ಲವುದರ ಬಗೆಗಿನ ಅನೂಹ್ಯ ಮಾಹಿತಿಗಳಿವೆ.
ಪ್ರಕೃತಿ ನಡುವಿನಲ್ಲಿದ್ದ ಗುರುಕುಲಗಳ ಧ್ಯೇಯಗಳು ಅವು ವಟುಗಳಲ್ಲಿ ಮೂಡಿಸುತ್ತಿದ್ದ ಮೌಲ್ಯ ಮಾದರಿಗಳು ಅಚ್ಚರಿ ಹುಟ್ಟುಸುತ್ತವೆ. ಅಷ್ಟೇ ಅಲ್ಲದೆ ಇಲ್ಲಿನ ಬಹುಪಾಲು ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 30 ಕ್ಕಿಂತಾ ಹೆಚ್ಚಿರದಿದ್ದುದ್ದು ಬ್ರಾಹ್ಮಣೇತರರಿಗೆ ಇದ್ದ ಅವಕಾಶಗಳ ಬಗ್ಗೆ ಖುಷಿ ಮೂಡಿಸುತ್ತದೆ. ಇದು ಇಲ್ಲಿಯವರಿವಿಗೂ ಬಹುಪಾಲು ಜನರಿಗೆ ತಿಳಿಯದಿದ್ದ ಮಾಹಿತಿ ಅನ್ನಿಸುತ್ತದೆ.
ಅನೇಕ ಶಿಕ್ಷಣ ಸಂಸ್ಥೆಗಳ ಉಳಿವು ರಾಜಾಶ್ರಯ ಮಾತ್ರವಲ್ಲದೆ ಹಳ್ಳಿಗಳ ನೆರವಿನಿಂದ ಬಂದ ಹಣದಿಂದ ನಡೆಯುತ್ತಿತ್ತು ಎಂದು ತಿಳಿದಾಗ ಆಗಿನ ಜನರಿಗೆ ವಿದ್ಯೆಯಮೇಲೆ ಇದ್ದ ಗೌರವದ ಬಗ್ಗೆ ಆ ಪರಂಪರೆಯ ಬಗೆಗೆ ಕೃತಜ್ಞತೆ ಮೂಡುತ್ತದೆ.
ಹಲವು ಪಂಗಡಗಳನ್ನು ಸಮಾಜ ಅತ್ಯಂತ ಕ್ರೂರವಾಗಿ ನಡೆಸಿಕೊಂಡಿದೆ. ಅವರನ್ನು ಕನಿಷ್ಠ ಮರ್ಯಾದೆಯೂ ಕೊಡದೆ ನಗಣ್ಯವಾಗಿ ಸಹ ನೋಡಿದೆ. ಆದರೂ ಅಂದಿನ ಒಳ್ಳೆಯ ತನಗಳ ಬಗ್ಗೆ ನಾವು ಓದಿದ್ದು ಕಡಿಮೆಯೇ ! ಇದು ನಮ್ಮ ಇತಿಹಾಸದ ಅರ್ಧಸತ್ಯದ ತಿಳುವಳಿಕೆಯ ರಾಜಕೀಯವೇ ಆಗಿದೆ ಮತ್ತು ಸತ್ಯ ಅದರ ಕಪಿಮುಷ್ಟಿಯಲ್ಲೇ ಶತಮಾನಗಳು ನರಳಿದೆ.
ನಮ್ಮಲ್ಲಿ ಅತ್ಯಂತ ಸಮರ್ಥ ಶಿಕ್ಷಣ ಪದ್ಧತಿ ಮತ್ತು ಪರಂಪರೆ ಮೊದಲು ಮುಸ್ಲಿಂ ಮತಾಂಧರ ನಂತರ ಸುಲ್ತಾನರ ಆಳ್ವಿಕೆಯಲ್ಲಿ ನರಳಿ ಬವಳಿ ಬೆಂಡಾಗಿ ನಂತರ ಬ್ರಿಟೀಷರ ( ಲಾರ್ಡ್ ಮೆಕಾಲೆಯಂಥವರ ) ಕೈಯಲ್ಲಿ ಅಸುನೀಗಿದ್ದರ ಪರಿಣಾಮಕಾರಿ ಚಿತ್ರಣವಿದೆ.
ನಮ್ಮದೆಲ್ಲ ಶ್ರೇಷ್ಠ ಎನ್ನುವವರು ಒಂದುಕಡೆಯಾದರೆ ಆ ಎಲ್ಲವನ್ನೂ ಅಲ್ಲಗಳೆಯುವವರು ಇನ್ನೊಂದು ಕಡೆ. ಈ ಇಬ್ಬರೂ ಈ ಪುಸ್ತಕವನ್ನು ಮತ್ತು ನಂತರದಲ್ಲಿ ಕೊಡಮಾಡಿದ ರೆಫರೆನ್ಸ್ ಪುಸ್ತಗಳನ್ನೊಮ್ಮೆ ಓದಿದರೆ ಅಭಿಪ್ರಾಯಗಳು ಕೊಂಚ ಬದಲಾಗಬಹುದು, ಅರಿವು ವಿಸ್ತರಿಸಬಹುದು. ನಮ್ಮ ಪರೆಂಪರೆಯಲ್ಲಿ ಅಡಗಿಹೋದ ಕೆಲವು ಸಂಗತಿಗಳ ಬಗ್ಗೆ ಮತ್ತು ಉದುಗಿಹೋದ ಪ್ರಶ್ನೆಗಳ ಉತ್ತರ ಸಿಗಬಹುದು.
Comments
Post a Comment