ಪೆರುಮಾಳ್ ಮುರುಗನ್ ನಮ್ಮ ಕಾಲದ ಅತ್ಯಂತ ಸೂಕ್ಷ್ಮ, ಅಪೂರ್ವ ಮತ್ತು ಅತ್ಯುತ್ತಮ ಬರಹಗಾರರು. ಗಾಢವಾದ ದೇಸಿ ಒಳನೋಟ, ಜೀವನಾನುಭವ, ಸಮಾಜದ ಪದರಗಳು, ಮನುಷ್ಯನ ಹಸಿವು, ಲೋಲುಪತೆ, ಸಣ್ಣ ಬುದ್ಧಿ, ಮಿ
ತಿಗಳು, ಧಾರಾಳತೆ, ನಂಬಿಕೆಗಳು, ಆಚರಣೆಗಳು ಮುಂತಾದವುಗಳನ್ನು ಒಳ ಮತ್ತು ಹೊರಗಣ್ಣಿನಿಂದ ಏಕಕಾಲಕ್ಕೆ ನೋಡುವ ಛಾತಿಯುಳ್ಳವರು.
One part woman ನ್ನಿನ ಇಂಗ್ಲಿಷ್ ಅನುವಾದಿತ ಕೃತಿಯೇ ಈ ಮಟ್ಟದಲ್ಲಿರಬೇಕಾದರೆ ಮೂಲ ತಮಿಳಿನ ಅನುಭವ ಹೇಗಿರಬಹುದು ಎಂಬ ಆಲೋಚನೆಯೇ ಮತ್ಸರಕ್ಕೆ ಕಾರಣವಾಗಬಹುದು. ಅತ್ಯಂತ ಮಿತವಾಗಿ ಮಾತನಾಡುವ (ತಮಿಳಿನಲ್ಲಿ) ಪೆರುಮಾಳ್ ಮುರುಗನ್ನರ ಈ ಕೃತಿ ಬಿಡುಗಡೆಯಾದಾಗ ಸಂಪ್ರದಾಯವಾದಿಗಳಿಂದ ಮತ್ತು ಇತರೆ ಗುಂಪುಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಕಾರಣ ಈ ಕೃತಿಯಲ್ಲಿ ಸಂತಾನವಿಲ್ಲದ ದಂಪತಿ ಸಂತಾನಕ್ಕಾಗಿ ಅರಸುವ ದಾರಿ ! ಇಲ್ಲಿ ಸ್ತೂಲವಾಗಿ ' ವಂಶವೃಕ್ಷದ ' ಎಳೆಯನ್ನು ಕಾಣಬಹುದು.
ಒಂದು ಹಂತದಲ್ಲಿ ಈ ಪುಸ್ತಕವನ್ನು ಬ್ಯಾನ್ ಮಾಡಬೇಕೆಂಬ ತೀವ್ರ ಒತ್ತಡ ಇದ್ದಿತು. ಇದಕ್ಕೆ ಬೇಸತ್ತ ಪೆರುಮಾಳ್ ಸ್ವಲ್ಪ ಮೆತ್ತಗಾದರು ಮತ್ತು ತಾನು ಇನ್ನು ಮುಂದೆ ಬರೆಯುವುದೇ ಇಲ್ಲವೆಂದು ನೊಂದುಕೊಂಡರು. ನಂತರದ ದಿನಗಳಲ್ಲಿ ತಮ್ಮ ಅಭಿವ್ಯಕ್ತಿಗೆ ಮೇಕೆಯಂತ ನಿರುಪದ್ರವಿ ಪ್ರಾಣಿಯನ್ನು ನೆಚ್ಚಿಕೊಂಡರು. ಇದಕ್ಕೆ ಅವರು ಕೊಟ್ಟ ಕಾರಣ ಹಸು ಪವಿತ್ರ, ಹಂದಿ ಅನಿಷ್ಟ, ಹುಲಿ ದೇವರ ವಾಹನ ಇತರ ಪ್ರಾಣಿಗಳೂ ಸಹ ಒಂದಿಲ್ಲೊಂದು ರೀತಿಯಲ್ಲಿ ಕಾಂಟ್ರವರ್ಸಿ ಸೃಷ್ಟಿಸಬಹುದು ಆದರೆ ಮೇಕೆಗೆ ಅಂತಹಾ ಕಷ್ಟವಿಲ್ಲ ಎಂಬುದು. ಇದು ಹಾಸ್ಯಾಸ್ಪದ ಅನ್ನಿಸಿದರೂ ಸೃಜನಶೀಲ ವ್ಯಕ್ತಿಯೊಬ್ಬನ ಅಭಿವ್ಯಕ್ತಿಗೆ ಹೇಗೆ ಸಮಾಜ ವಿರೋಧ ವ್ಯಕ್ತಪಡಿಸುತ್ತದೆ ಎನ್ನುವುದು ಅತ್ಯಂತ ಕಳವಳಕಾರಿ.
ಲೇಖಕನೊಬ್ಬ ತನ್ನ ಅಭಿವ್ಯಕ್ತಿಯ ಇತಿ ಮಿತಿ ಜವಾಬ್ಧಾರಿಯನ್ನು ಅರಿಯಬೇಕೆ? ಅರಿತು ಅದರಲ್ಲೇ ಬರೆಯಬೇಕೆ ಅಥವಾ ಅದನ್ನು ಮೀರಬೇಕೇ ಎಂಬುದೊಂದು ಗಹನವಾದ ಜಿಜ್ಞಾಸೆ. ಇದರ ಉತ್ತರ ಸುಲಭವಲ್ಲ. ನಾನಾ ಆಚಾರ, ವಿಚಾರ, ಪಂಥ, ಧರ್ಮ, ಜಾತಿ, ರೀತಿ, ಉಡುಗೆ-ತೊಡುಗೆ, ಆಹಾರದ ಕಟ್ಟುಪಾಡುಗಳಿರುವ ನಮ್ಮ ದೇಶದಲ್ಲಿ ಸೃಜನಶೀಲ ವ್ಯಕ್ತಿಯೊಬ್ಬನಿಗೆ ಎಷ್ಟು ಸರಕು ಸಿಗಬಹುದೋ ಅಷ್ಟೇ ಕಷ್ಟದ ಹಾದಿಯನ್ನೂ ಸವೆಸಬೇಕಾಗುತ್ತದೆ. ಈ ಹಾದಿಯನ್ನು ಪೆರುಮಾಳ್ ಮುರುಗನ್ ಜತನದಿಂದಲೇ ಕ್ರಮಿಸಿದ್ದಾರೆ.
" One part woman" ಗೆ ಬರುವುದಾದರೆ ಇದೊಂದು ಆಧುನಿಕ ಕ್ಲಾಸಿಕ್. ಲೇಖಕನೊಬ್ಬ ತನ್ನ ಸೃಜನಶೀಲತೆಯ ಮತ್ತು ಅರಿವಿನ ಉತ್ತುಂಗದಲ್ಲಿದ್ದಾಗ ಮಾತ್ರ ಬರೆಯ ಬಹುದಾದಂತಹ ಕೃತಿ.
Comments
Post a Comment