ಈ ಪುಸ್ತಕವನ್ನು ನಾನು ಒಂದೇ ಗುಕ್ಕಿನಲ್ಲಿ ಓದಿದೆ.
ಜೋಗಿಯವರ ನಿರೂಪಣೆ ಇದ್ದರೂ ಈ ಪುಸ್ತಕ ಪಾರ್ವತಮ್ಮನವರ ಮಾತುಗಳಲ್ಲೇ ಭಾಗಷಃ ಬಂದಿರುವುದು ಜೋಗಿಯವರ ಪುಸ್ತಕಗಳನ್ನು ಓದಿದ ಯಾರಿಗೂ ಸುಲಭವಾಗಿ ಹೊಳೆವ ಸಂಗತಿ. ಇದು ಬೇಕಾಗಿತ್ತೂ ಕೂಡ ಅನ್ನಿಸಿತು.
ನಮಗೆಲ್ಲಾ ಡಾ.ರಾಜ್ ರ ಧೈತ್ಯ ಪ್ರತಿಭೆ ಬಗ್ಗೆ, ಪಾರ್ವತಮ್ಮನೆಂಬ ಗಟ್ಟಿಗಿತ್ತಿಯ ಬಗ್ಗೆ ಗೊತ್ತು.
ಆದರೆ ಅವರ ತಿಳಿಹಾಸ್ಯದ ಪ್ರವೃತ್ತಿಯ ಬಗ್ಗೆ ಗೊತ್ತಾ ? ಅವರ ನೇರವಂತಿಕೆ ಮತ್ತು ನಿಷ್ಟೂರತೆಯ ಬಗ್ಗೆ ಗೊತ್ತಾ ?
ಈ ಪುಸ್ತಕ ಅವನ್ನೆಲ್ಲಾ ಗೊತ್ತು ಮಾಡಿಕೊಡುತ್ತದೆ ! ಅಷ್ಟೇ ಅಲ್ಲದೆ ಅವರ ಸಾಹಿತ್ಯದ ಒಲವಿನ ಬಗ್ಗೆ, ಅವರಿಗೆ ಇಷ್ಟವಾದ ಕಾದಂಬರಿಯ, ಅಥವಾ ಕಥೆಯನ್ನು ಸಿನಿಮಾ ಮಾಡಲು ಅವರು ಸಂಪರ್ಕಿಸಿ ಕೈಸುಟ್ಟುಕೊಂಡ ಲೇಖಕರ ಬಗ್ಗೆ, ಅವರ ಮನೆಗೆ ಬಂದು ಜಾಂಡಾ ಹೂರಿ, ತಿಂಗಳುಗಳ ಗಟ್ಟಲೆ ಕಳೆಯುತ್ತಿದ್ದ ಚೌರಿಕನ ಬಗ್ಗೆ , ಡಾ. ರಾಜ್ ಅವರ ಮಾಂಸ ಪ್ರಿಯತೆ ಬಗ್ಗೆ, ಅವರು ಸಹಾಯ ಮಾಡಿದ ಅಸಂಖ್ಯ ಕಲಾವಿದರು, ತಂತ್ರಜ್ಞರು ಮತ್ತು ಮನೆಕೆಲಸದ ಹುಡುಗರ ಬಗ್ಗೆ ..... ಒಟ್ಟಿನಲ್ಲಿ ಕನ್ನಡ ಚಿತ್ರರಂಗ ನಡೆದುಬಂದ ಅಖಂಡ ೬೦ ವರ್ಷಗಳ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ನಿರೂಪಿಸಿದ್ದಾರೆ.
ಪಾರ್ವತಮ್ಮನವರಿಗಿದ್ದ ಸಿನಿಮಾ ಜಾಣ್ಮೆಯಬಗ್ಗೆ ಹೇಳಬೇಕೆಂದರೆ " ಹಿನ್ನೆಲೆ ಸಂಗೀತ ಇರುವಾಗ ಬೇಕಾದರೆ long shot ಹಾಕಿ , ಸಾಹಿತ್ಯ ಬಂದಾಗ close -up ಇರಲಿ , ಆಗಲೇ ಭಾವನೆಗಳು-ಸಾಹಿತ್ಯ ಅರ್ಥವಾಗೋದು " ಅನ್ನುತ್ತಾರೆ !
ಅವರ ಗರಡಿಯಲ್ಲಿ ಬಂದ ಮಯೂರ, ಶ್ರೀ ಕೃಷ್ಣದೇವರಾಯ, ಸನಾದಿ ಅಪ್ಪಣ್ಣ ಯಾವುದಕ್ಕೂ ಅವಾರ್ಡುಗಳು ಬರದದನ್ನು ಅವರು ಬೇಜಾರಿನಿಂದ ಹೇಳಿಕೊಳ್ಳುತ್ತಾರೆ.
ಜನ ನೋಡದ ಸಿನಿಮಾಕ್ಕೆ ಅದ್ಯಾಕೆ ಅವಾರ್ಡು ಸಬ್ಸಿಡಿ ಕೊಡುತ್ತಾರೋ ಎಂಬುದು ಅವರ ಯಕ್ಷ ಪ್ರಶ್ನೆ ! ಕೆಲವೊಮ್ಮೆ ನಮ್ಮದೂ ಕೂಡ.
ಅವರ ಅಷ್ಟಗಲದ ಕುಂಕುಮ ನನಗೆ ನಮ್ಮ ತುಮಕೂರಿನಲ್ಲಿ ಗಂಡಸಿನ ಸಮಕ್ಕೆ ನಿಂತು ದಿನನಿತ್ಯ ತರಕಾರಿ ಮಾರುವ " ತಿಗಳರ " ತಾಯಂದಿರನ್ನೂ, ಹಾಗೆಯೇ ನಸುಕಿಗೇ ಮೀನಿನ ಮಂಕರಿಯನ್ನು ಮಂಗಳೂರಿನ ಪಣಂಬೂರಿನಿಂದ ಸ್ಟೇಟ್ ಬ್ಯಾಂಕ್ ಗೆ ಒಯ್ಯುವ " ಮೊಗವೀರರ " ತಾಯಂದಿರನ್ನು ನೆನಪಿಸುತ್ತಿದೆ.
ಒಟ್ಟಿನಲ್ಲಿ ಪಾರ್ವತಮ್ಮನವರ ಹಣೆಯ ಅಗಲವಾದ ಕುಂಕುಮ ಮಹಿಳೆ ಒಬ್ಬರ ಗಟ್ಟಿತನದ, ಸ್ವಾಲಂಭನೆಯ, ಧೈರ್ಯದ, ಮಣ್ಣಿನ ಸೊಗಡಿನ ಮತ್ತು ಮಮತೆಯ ಸಂಕೇತವೇ ಅನ್ನಿಸುತ್ತದೆ.
" ನಾನು ಪಾರ್ವತಿ " ಒಪ್ಪವಾಗಿ ಒಪ್ಪುವ ಶೀರ್ಷಿಕೆ !
Comments
Post a Comment